ಬೆಂಗಳೂರು: ಬೈಕ್ ನಲ್ಲಿ ಪೋಷಕರ ಜತೆ ಪ್ರಯಾಣಿಸುವ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮೋಟಾರು ವಾಹನ ಕಾಯಿದೆಯನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಿರಬೇಕು. ಈ ನಿಟ್ಟಿನಲ್ಲಿ 9 ತಿಂಗಳಿಂದ 4 ವರ್ಷದ ಮಕ್ಕಳು ಹೆಲೈಟ್ ಧರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವಿಶೇಷ ಜಾಗೃತಿ ಹಾಗೂ ಕಾರ್ಯಾಚರಣೆಯನ್ನು ಸಂಚಾರ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಮಕ್ಕಳಿಗೆ ಹೆಲೈಟ್ ಹಾಕದೆ ಕರೆದೊಯ್ಯುತ್ತಿರುವ ಪೋಷಕರಿಗೆ ದಂಡ ವಿಧಿಸುತ್ತಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವ ಮಕ್ಕಳಿಗೆ ಹೆಲ್ಮೆಟ್ ಮತ್ತು ಸುರಕ್ಷತಾ ಕ್ರಮಗಳುಳ್ಳ ಕೇಂದ್ರ ಮೋಟಾರು ವಾಹನ ನಿಯಮಗಳು 2022ರ ನಿಯಮ 138ರ ಅನುಷ್ಟಾನಕ್ಕೆ ಸಂಬಂಧಿಸಿದಂತೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಕ್ಕಳಿಗಾಗಿ ಸುರಕ್ಷತಾ ಪರಿಕರಗಳನ್ನು ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು, 2022ರ ಸೆಕ್ಷನ್ 138(7)ರ ಮೂಲಕ ಪರಿಚಯಿಸಲಾಗಿದೆ, ಇದನ್ನು ಫೆಬ್ರವರಿ 15, 2022ರಂದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರ ಅಡಿ ಸೂಚಿಸಲಾಗಿದೆ. ಸುರಕ್ಷತಾ ಸಲಕರಣೆಗಳ ಜೊತೆಗೆ, ನಾಲ್ಕು ವರ್ಷ ವಯಸ್ಸಿನ ಮಗುವನ್ನು ಹಿಂಬದಿ ಸವಾರನಾಗಿ ಸಾಗಿಸುವಾಗ ಮೋಟಾರ್ಸೈಕಲ್ನ್ನು ವೇಗವು ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚಿರಬಾರದು ಎಂದು ಹೊಸ ನಿಯಮಗಳು ತಿಳಿಸಲಿವೆ.








