ನವಜಾತ ಶಿಶುಗಳಿಗೆ ಬರುವ 12 ಮಾರಕ ರೋಗಗಳ ವಿರುದ್ಧ ಪ್ರತಿ ತಿಂಗಳು ಲಸಿಕೆಯನ್ನು ಹಾಕಿಸಬೇಕು ಎಂದು ತಾಯಿ-ಮಕ್ಕಳ ಆಸ್ಪತ್ರೆ, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಶಶಿಕಾಂತ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ತಾಯಿ-ಮಕ್ಕಳ ಆಸ್ಪತ್ರೆಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ವೈದ್ಯಕೀಯ, ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಯಿ-ಮಕ್ಕಳ ಆಸ್ಪತ್ರೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ನವಜಾತ ಶಿಶು ಸಪ್ತಾಹ” ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಪ್ರತಿ ವರ್ಷ ನವೆಂಬರ್ 15 ರಿಂದ 21ರ ವರೆಗೆ “ರಾಷ್ಟ್ರೀಯ ನವಜಾತ ಶಿಶು ಸಪ್ತಾಹ” ಕಾರ್ಯಕ್ರಮವನ್ನು “ನವಜಾತ ಶಿಶು ಸುರಕ್ಷತೆ-ಪ್ರತೀ ಸ್ಪರ್ಶದಲ್ಲೂ, ಪ್ರತೀ ಸಮಯದಲ್ಲೂ ಪ್ರತಿ ಶಿಶುವಿಗೂ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಇದರ ಉದ್ದೇಶ ನವಜಾತ ಶಿಶುಗಳಿಗೆ ಉಂಟಾಗುವ ಖಾಯಿಲೆಗಳಿಂದ ರಕ್ಷಿಸಿ, ಶಿಶು ಮರಣವನ್ನು ತಡೆಗಟ್ಟಲು ತಾಯೆಂದಿರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ ಎಂದರು.
ಹುಟ್ಟಿದ 28 ದಿನ ಮಗುವನ್ನು ನವಜಾತು ಶಿಶು ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಶಿಶುವಿಗೆ ಸ್ವಚ್ಛತೆ ಕಾಪಾಡದಿದ್ದರೆ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಹುಟ್ಟಿದ ಅರ್ಧಗಂಟೆಯೊಳಗೆ ತಾಯಿಯ ಎದೆಹಾಲು ನೀಡಬೇಕು. 6 ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲನ್ನು ನೀಡಬೇಕು ಬೇರೇನೂ ನೀಡಬಾರದು. ಮಗುವನ್ನು ಬೆಚ್ಚಗಿಡಬೇಕು. ಆಸ್ಪತ್ರೆಯಿಂದ ಮನೆಗೆ ಬಿಡುಗಡೆ ಹೊಂದಿ ಮನೆಗೆ ತೆರಳಿದ ನಂತರ ಮಗುವಿಗೆ ಬರೆ ಹಾಕುವುದು, ಸಕ್ಕರೆ ನೀರು ಕುಡಿಸುವುದು ಮಾಡಬಾರದು. ಒಕ್ಕಳ ಬಳ್ಳಿಗೆ ಏನನ್ನೂ ಹಚ್ಚಬಾರದು. ಪ್ರತೀ ಗಂಟೆಗೆ ಒಂದು ಸಾರಿ ತಾಯಿಯ ಎದೆಹಾಲು ಕುಡಿಸಬೇಕು. ಮಗುವನ್ನು ತಾಯಿಯ ಪಕ್ಕದಲ್ಲಿಯೇ ಮಲಗಿಸಬೇಕು. ಶಿಶುಗಳಿಗೆ ಬರುವ 12 ಮಾರಕ ರೋಗಗಳ ವಿರುದ್ದ ಪ್ರತೀ ತಿಂಗಳು ಲಸಿಕೆ ಹಾಕಿಸಬೇಕು. ತಾಯಿಯು ತಮಗೆ ನೀಡಿದ ತಾಯಿ ಕಾರ್ಡ್ನ್ನು ತಪ್ಪದೇ ಓದಿ, ನಿಯಮಗಳನ್ನು ಪಾಲಿಸಬೇಕು. ಶಿಶುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ವಿಧಾನಗಳಾದ ನುಂಗುವ ಮಾತ್ರೆ, ಅಂತರ ಚುಚ್ಚುಮದ್ದು, ವಂಕಿದಾರಣೆ, ಪುರುಷರು ಬಳಸುವ ನಿರೋಧ ಬಳಸುವಂತೆ ಮಾಹಿತಿ ನೀಡಿದರು.
ಕೊಪ್ಪಳ ವೈದ್ಯಕೀಯ ಮಾಹಾವಿದ್ಯಾಲಯದ ಚಿಕ್ಕಮಕ್ಕಳ ತಜ್ಞರಾದ ಡಾ. ಮಾರುತಿ ಅವರು ಶಿಶುಗಳಿಗೆ ಉಂಟಾಗುವ ಖಾಯಿಲೆಗಳು ಮತ್ತು ಅದರ ಚಿಕಿತ್ಸೆ ಮುಂಜಾಗ್ರತೆಗಳ ಕ್ರಮಗಳ ಕುರಿತು ವಿವರವಾಗಿ ಮತನಾಡಿದರು.
ಕೊಪ್ಪಳ ವೈದ್ಯಕೀಯ ಮಾಹಾವಿದ್ಯಾಲಯದ ಚಿಕ್ಕಮಕ್ಕಳ ತಜ್ಞರಾದ ಡಾ. ಉದಯ ಕೆ. ಅವರು ಮಕ್ಕಳ ದತ್ತು ಮಾಸಾಚರಣೆ ಕಾರ್ಯಕ್ರಮ ಕುರಿತು ವಿವರವಾಗಿ ತಿಳಿಸಿದರು.
ಜಿಲ್ಲಾ ಆರೊಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಬಾಲ್ಯವಿವಾಹ ನಿಷೇದ ಕಾಯ್ದೆ-2006ರ ಕುರಿತು ವಿವರವಾಗಿ ಮತನಾಡಿದರು.
ಈ ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳ ತಜ್ಞರಾದ ಡಾ. ಭಾರ್ಗವ ರೆಡ್ಡಿ, ಸ್ತ್ರೀರೋಗ ತಜ್ಞರಾದ ಡಾ. ಸುಷ್ಮಾ, ಹಿರಿಯ ಶುಶ್ರೂಷಕರ ಮೇಲ್ವಿಚಾರಕಿಯಾದ ತೈರುನ್ನಿಸ್ ಸೈಯದ್ ಬೇಗಂ, ಕೆ.ಹೆಚ್.ಪಿ.ಟಿ ಚಂದ್ರಶೇಖರ, ಆಪ್ತಸಮಾಲೋಚಕ ಎನ್.ಬಿ ನಾಗರಾಜ ಚೌದ್ರಿ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು, ಗರ್ಭಿಣಿ ಬಾಣಂತಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.








