ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಆರೋಗ್ಯ ಎನ್ನುವುದು ಎಲ್ಲರಿಗೂ ಮುಖ್ಯವಾಗಿರುತ್ತದೆ. ದೇಹ ಸುಸ್ಥಿತಿಯಲ್ಲಿದ್ದರೆ ಮಾತ್ರ ದಿನನಿತ್ಯದ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಅದು ಮಕ್ಕಳ ವಿಷಯದಲ್ಲಿಯೂ ಅನ್ವಯವಾಗುತ್ತದೆ. ಈಗಂತೂ ಸಾಂಕ್ರಾಮಿಕ ಕಾಯಿಲೆಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳುವದು ತುಸು ಕಷ್ಟದ ಕೆಲಸವೇ ಸರಿ. ಇತ್ತೀಚೆಗೆ ಕೊರೋನಾ ಅಬ್ಬರ ಕಡಿಮೆಯಾಗುತ್ತಿದೆ. ಆದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಚೇರಿಗಳು ಆನ್ಲೈನ್ ಕೆಲಸಕ್ಕೆ ಅಂತ್ಯ ಹಾಡಿ ಆಫೀಸ್‌ಗೆ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ. ಅದೇ ರೀತಿ ಶಾಲೆಗಳೂ ಕೂಡ ಮಕ್ಕಳಿಗೆ ಆನ್ಲೈನ್ ಬದಲಿಗೆ ಭೌತಿಕವಾಗಿ ಪಾಠಮಾಡಲು ಆರಂಭಿಸಿವೆ. ಆದರೆ ಸಮಸ್ಯೆ ಎಂದರೆ ಶಾಲೆಗೆ ಹೋಗುವ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು.
ಅದಕ್ಕೆ ಹಲವು ಕಾರಣಗಳಿದೆ. ಆಹಾರ, ಜೀವನ ಶೈಲಿ ಒಂದು ರೀತಿಯಲ್ಲಿ ಕಾರಣವಾದರೆ ಮಕ್ಕಳು ಇರುವ ವಾತಾವರಣ ಕೂಡ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಇದನ್ನು ಹೊರತುಪಡಿಸಿ ಇನ್ನೂಂದಿಷ್ಟು ಕಾರಣಗಳಿಂದ ಮಕ್ಕಳು ಆಗಾಗ ಹುಷಾರಿಲ್ಲದಂತೆ ಆಗುತ್ತಾರೆ. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಸರಿಯಾಗಿ ಆಹಾರ ತಿನ್ನದೇ ಇರುವುದು, ಪೌಷ್ಟಿಕಾಂಶಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಪರಿಣಾಮ ಆಗಾಗ ಶೀತ, ಕೆಮ್ಮು, ಜ್ವರದಂತಹ ಕಾಯಿಲೆಗಳಿಗೆ ತುತ್ತಾಗುತ್ತಾರೆ.
ಕೆಲವೊಮ್ಮೆ ಹವಾಮಾನ ಬದಲಾವಣೆ ಕೂಡ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ, ಕಲುಷಿತ ನೀರಿನ ಸೇವನೆ, ಸ್ವಚ್ಛತೆಯ ಕೊರತೆಯಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ.
ಇದರಿಂದಾಗಿ ಮಕ್ಕಳು ಜೀವನಶೈಲಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಅನಾರೋಗ್ಯ ಪೀಡಿತರಾಗುತ್ತಾರೆ. ಇದನ್ನು ತಪ್ಪಿಸಲು ಪೌಷ್ಟಿಕ ಆಹಾರವನ್ನು ನೀಡಬೇಕು. ಅದೇ ರೀತಿ ಸ್ವಚ್ಛತೆಯೆಡೆಗೆ ಮಕ್ಕಳು ಹೆಚ್ಚು ಗಮಹರಿಸುವಂತೆ ಮಾಡಿದರೆ ಕಾಯಿಲೆಯ ಅಪಾಯದಿಂದ ದೂರವಿರಬಹದು.
ಮಕ್ಕಳು ಸದಾ ಚಟುವಟಿಕೆಯಿಂದ ಇದ್ದರೆ ಮಾತ್ರ ಆರೋಗ್ಯವಂತರಾಗಿರುತ್ತಾರೆ.
ಇಲ್ಲವಾದರೆ ಜಡತ್ವದಿಂದ ಅವರ ದೇಹಕ್ಕೂ ಅನೇಕ ಕಾಯಿಲೆಗಳು ಅಂಟಿಕೊಳ್ಳಬಹುದು
. ಇನ್ನು ಶಾಲೆಗೆ ಹೋದಾಗ ಮಕ್ಕಳೊಂದಿಗೆ ಮಣ್ಣು, ಕೆಸರಿನಲ್ಲಿ ಆಟವಾಡಿದಾಗ ಬ್ಯಾಕ್ಟೀರಿಯಾಗಳು ದೇಹ ಸೇರಿ ಅನಾರೋಗ್ಯ ಉಂಟಾಗುವಂತೆ ಮಾಡುತ್ತದೆ. ಆದ್ದರಿಂದ ಮಕ್ಕಳನ್ನು ಸದಾ ಕ್ರೀಯಾಶೀಲರನ್ನಾಗಿಸಿಡಬೇಕು.
ಮಕ್ಕಳೊಂದಿಗೆ ಬೆರೆಯುವಾಗಲೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಪದೇ ಪದೇ ಕಾಯಿಲೆ ಬೀಳುವುದು ತಪ್ಪುತ್ತದೆ.
ಇನ್ನು ಶುಚಿತ್ವ ಮತ್ತು ಆರೋಗ್ಯ ಸೇವನೆಯ ಬಗ್ಗೆ ಹೆಚ್ಚು ಎಚ್ಚರಿಕೆವಹಿಸಿ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಇಂದಿನ ದಿನಗಳಲ್ಲಿ ಚಿಕ್ಕಮಕ್ಕಳೂ ಕೂಡ ಮೊಬೈಲ್, ಟಿವಿ ದಾಸರಾಗುತ್ತಿದ್ದಾರೆ. ಮಧ್ಯರಾತ್ರಿ ಕಳೆದರೂ ಮೊಬೈಲ್ ನೋಡುವುದು ಹವ್ಯಾಸವಾಗಿಬಿಟ್ಟಿದೆ.
ಇದರಿಂದ ಸರಿಯಾಗಿ ನಿದ್ದೆ ಆಗುವುದಿಲ್ಲ. ಮಕ್ಕಳ ಆರೋಗ್ಯ ಸರಿಯಾಗಿರಬೇಕೆಂದರೆ 9 ಗಂಟೆಗಳ ನಿದ್ದೆ ಅಗತ್ಯವಾಗಿರುತ್ತದೆ. ನಿದ್ದೆ ಕಡಿಮೆಯಾದಂತೆ ಅನಾರೋಗ್ಯದ ಪಟ್ಟಿಯೇ ಬೆಳೆಯುತ್ತದೆ.
ಕಣ್ಣಿನ ಸಮಸ್ಯೆ, ತಲೆನೋವು, ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಖಿನ್ನತೆ, ಆತಂಕದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣದಿಂದ ದೇಹದಲ್ಲಿ ಶಕ್ತಿ ಇಲ್ಲದಂತಾಗಿ ಸದಾ ಸುಸ್ತು, ಬಳಲಿಕೆ ಕಾಡುತ್ತದೆ. ಶಾಲೆಗೆ ಹೋಗಲು, ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗದಂತಹ ಸ್ಥಿತಿ ಎದುರಾಗುತ್ತದೆ.
ಮಕ್ಕಳಿಗೆ ಹಣ್ಣು ತರಕಾರಿಗಳಿಗಿಂತ ಪಿಜ್ಜಾ, ಬರ್ಗರ್‌ಗಳಂತಹ ಜಂಕ್‌ಫುಡ್‌ಗಳ ಕಡೆಗೇ ಹೆಚ್ಚು ಒಲವು. ಪರಿಣಾಮ ಅನಾರೋಗ್ಯ. ಶಾಲೆಗೆ ತೆರಳುವಾಗಲೂ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ಹುಷಾರಿಲ್ಲದೆ ಮಲಗುವುದು ಸಾಮಾನ್ಯವಾಗುತ್ತದೆ. ಬುತ್ತಿಯಲ್ಲಿಯೂ ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಮಧ್ಯಾಹ್ನ ಹಸಿದ ಹೊಟ್ಟೆಗೆ ವಿಷ ನೀಡಿದಂತೆಯೇ ಸರಿ. ಹೀಗಾಗಿ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
ಅದಕ್ಕಾಗಿ ತರಕಾರಿಗಳನ್ನು ಉಪಯೋಗಿಸಿ, ಕಡಿಮೆ ಮಸಾಲೆ ಹಾಕಿ ಶುಚಿಯಾದ, ರುಚಿಕರ ತಿಂಡಿಗಳನ್ನು ಮಾಡಿಕೊಟ್ಟರೆ ಮಕ್ಕಳಿಗೆ ರುಚಿಯಾದ ಹಾಗೂ ಆರೋಗ್ಯಕರವಾದ ಆಹಾರವೂ ಸಿಕ್ಕಿದಂತಾಗುತ್ತದೆ.
ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ತಾಯಂದಿರ ಪಾತ್ರ ದೊಡ್ಡದು. ಅವರ ಪ್ರತೀ ನಡೆಯ ಮೇಲೂ ಒಂದು ರಕ್ಷಣಾ ಕವಚದ ಕಣ್ಣುಗಳನ್ನು ಇರಿಸಿ ಸರಿಯಾದ ಮಾರ್ಗದರ್ಶನ ನೀಡಿದರೆ ಮಕ್ಕಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಶಾಲೆಗೆ ಹೋಗುವ ಚಿಕ್ಕ ಮಕ್ಕಳು ವರ್ಷದಲ್ಲಿ ಐದರಿಂದ ಆರು ಬಾರಿ ಶೀತಕ್ಕೆ ಒಳಗಾಗುತ್ತಾರೆ. ಅದಕ್ಕೆ ಹೆದರುವುದು ಬೇಡ. ಆದರೆ ಅದರ ತೀವ್ರತೆ ಬಗ್ಗೆ ಎಚ್ಚರವಿರಲಿ. ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಮೊದಲ ಆದ್ಯತೆಯಾಗಿರಲಿ.
ಮಕ್ಕಳು ಕೆಲವೊಮ್ಮೆ ಬದಲಾದ ಹವಾಮಾನದಿಂದಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಿ. ಉದಾಹರಣೆಗೆ ಮಲೇರಿಯಾ, ಟೈಫಾಯಿಡ್ ಇತ್ಯಾದಿ.