ಇಸ್ಲಾಮಾಬಾದ್: ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಇರಾನ್ ಮತ್ತು ಅಮೆರಿಕ ನಡುವಿನ ಭೀಕರ ಸಂಘರ್ಷಕ್ಕೆ ತೆರೆ ಎಳೆಯಲು ನೆರೆಯ ಪಾಕಿಸ್ತಾನ ಈಗ ಸಂಧಾನಕಾರನ ಪಾತ್ರ ವಹಿಸಲು ಮುಂದೆ ಬಂದಿದೆ. ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆಗೆ ಆತಿಥ್ಯ ವಹಿಸಲು ಸಿದ್ಧವಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ಒಪ್ಪಿಗೆ ಸೂಚಿಸಿದರೆ, ಇಸ್ಲಾಮಾಬಾದ್‌ನಲ್ಲಿ “ಅರ್ಥಪೂರ್ಣ ಮತ್ತು ನಿರ್ಣಾಯಕ” ಮಾತುಕತೆ ನಡೆಸಲು ಪಾಕಿಸ್ತಾನ ವೇದಿಕೆ ಒದಗಿಸಲಿದೆ.ವರದಿಗಳ ಪ್ರಕಾರ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಯುದ್ಧ ವಿರಾಮದ ಸಾಧ್ಯತೆಗಳ ಬಗ್ಗೆ ಚರ್ಚಿಸಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರಾಜತಾಂತ್ರಿಕ ಮಾರ್ಗದ ಮೂಲಕ ಬಿಕ್ಕಟ್ಟು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ತುರ್ಕಿ ಮತ್ತು ಈಜಿಪ್ಟ್ ದೇಶಗಳೂ ಸಹ ಈ ಸಂಧಾನ ಪ್ರಯತ್ನದಲ್ಲಿ ಪಾಕಿಸ್ತಾನದೊಂದಿಗೆ ಕೈಜೋಡಿಸುತ್ತಿವೆ ಎಂದು ತಿಳಿದುಬಂದಿದೆ.








