ಬಲೂಚಿಸ್ತಾನ: ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯ ರೈಲ್ವೆ ಹಳಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಜಾಫರ್ ಎಕ್ಸ್ ಪ್ರೆಸ್ ರೈಲಿನ ಆರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ
ಪಾಕಿಸ್ತಾನ ರೈಲ್ವೆಯ ಕ್ವೆಟ್ಟಾ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಹಮ್ಮದ್ ಕಾಶಿಫ್ ಮಾತನಾಡಿ, “ರೈಲ್ವೆ ಹಳಿಗೆ ಜೋಡಿಸಲಾಗಿದ್ದ ಬಾಂಬ್ ಜೋರಾಗಿ ಸ್ಫೋಟಗೊಂಡು ರೈಲಿನ ಆರು ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.” ಎಂದಿದ್ದಾರೆ.
350 ಪ್ರಯಾಣಿಕರೊಂದಿಗೆ ರೈಲು ಕ್ವೆಟ್ಟಾದಿಂದ ಪೇಶಾವರ್ ಸಿಟಿ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಮಸ್ತುಂಗ್ನ ದಶ್ತ್ ತಹಸಿಲ್ನ ಸ್ಪೆಜಾಂಡ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಡಾನ್ ವರದಿ ಮಾಡಿದೆ.
“ಘಟನೆಯ ಬಗ್ಗೆ ಎಚ್ಚರಿಕೆ ನೀಡಿದ ಕೂಡಲೇ ಭದ್ರತಾ ಪಡೆಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು ಮತ್ತು ಪ್ರದೇಶವನ್ನು ಸುತ್ತುವರಿದ ನಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು” ಎಂದು ಕಾಶಿಫ್ ಹೇಳಿದ್ದಾರೆ.
ಜಾಫರ್ ಎಕ್ಸ್ಪ್ರೆಸ್ನ ನಾಲ್ಕು ಬೋಗಿಗಳನ್ನು ಮತ್ತೆ ಹಳಿಗೆ ತರಲಾಗಿದ್ದು, ಉಳಿದ ಎರಡು ಬೋಗಿಗಳನ್ನು ಪುನಃಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಪಾಕಿಸ್ತಾನ ರೈಲ್ವೆಯ ಪರಿಹಾರ ರೈಲು 350 ಪ್ರಯಾಣಿಕರನ್ನು ಕ್ವೆಟ್ಟಾಗೆ ಮರಳಿ ಕರೆತಂದಿದೆ, ಆದರೆ ಹಳಿಯಲ್ಲಿ ಸಿಲುಕಿರುವ ಬೋಗಿಗಳನ್ನು ನಗರಕ್ಕೆ ಹಿಂದಿರುಗಿಸಲಾಗುವುದು ಎಂದು ಕಾಶಿಫ್ ನಂತರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.