ಉತ್ತರ ಕನ್ನಡ: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ತುಳಸಿಗೌಡ(86) ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಖ್ಯಾತ ಪರಿಸರ ಪ್ರೇಮಿ ತುಳಸಿಗೌಡ ಅವರು ಇನ್ನಿಲ್ಲವಾಗಿದ್ದಾರೆ.
ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆದಿದ್ದೇ ತುಳಸಿ ಗೌಡ. ಇವರು ಪರಿಸರ ಪ್ರೇಮಿ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಅಪಾರ. ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ! ಇವರು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದರೂ ಈಗಲೂ ಅಲ್ಲಿಗೆ ಹೋಗಿ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದರು.
ತುಳಸಿ ಕಳೆದ ಆರು ದಶಕಗಳಿಂದ ಈ ಕೆಲಸವನ್ನು ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಮಾಡುತ್ತಿದ್ದರು.. ಸ್ಥಳೀಯರು ಹೇಳುವಂತೆ ತುಳಸಿ ಅವರು, ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಸೇವೆಯನ್ನು ಗುರುತಿಸಿ, ಇಲಾಖೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಿತ್ತು. ೧೪ ವರ್ಷಗಳ ನಂತರ, ಅವರು ಸೇವೆಯಿಂದ ನಿವೃತ್ತರಾದರು. ಪಿಂಚಣಿ ಅವರ ಜೀವನೋಪಾಯದ ಏಕೈಕ ಮೂಲವಾಗಿತ್ತು.
ತುಳಸಿ ಅವರು ಜನಿಸಿದ್ದು ಬಡತನದಿಂದ ಬಳಲುತ್ತಿದ್ದ ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ. ಅವರು ಕೇವಲ ಎರಡು ವರ್ಷದಲ್ಲಿದ್ದಾಗ ಅವರ ತಂದೆಯ ಸಾವು ಅವರನ್ನು ತೀವ್ರವಾಗಿ ಬಾಧಿಸಿತ್ತು. ಆ ಬಳಿಕ ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಸಿಗಲಿಲ್ಲ. ಬಡತನವು ಬಾಲ್ಯದಿಂದಲೂ ದೈನಂದಿನ ಕೂಲಿ ಕಾರ್ಮಿಕರಾದ ತನ್ನ ತಾಯಿಯೊಂದಿಗೆ ಕೆಲಸ ಮಾಡಲು ಪ್ರೇರೇಪಿಸಿತು. ತುಳಸಿ ಚಿಕ್ಕ ವಯಸ್ಸಿನಲ್ಲಿಯೇ ಗೋವಿಂದ ಗೌಡ ಅವರನ್ನು ವಿವಾಹವಾದರು. ಆದರೆ ಅವರು ಕೆಲವೇ ವರ್ಷಗಳಲ್ಲಿ ನಿಧನರಾದರು. ಎಲ್ಲ ದುರ್ಘಟನೆಗಳನ್ನು ಧೈರ್ಯದಿಂದ ಎದುರಿಸಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿರುವ ಜೀವನವನ್ನು ನಡೆಸಿದ್ದರು.
ಇಂತಹ ತುಳಸಿಗೌಡ ಅವರ ಪರಿಸರ ಪ್ರೇಮತೆಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಿಸದೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಅವರು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳೋ ‘ಸರ್ಕಾರಿ ನೌಕರ’ರಿಗೆ ‘OOD’ ಬಗ್ಗೆ ಮಹತ್ವದ ಮಾಹಿತಿ
ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!