ಬೆಂಗಳೂರು: ಕ್ಯಾಪ್ ಧರಿಸಿದ ತಕ್ಷಣ ಎಷ್ಟು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಆತ್ಮಸ್ಥೈರ್ಯ ಬಂದಿದೆ. ನಾವು ಕೂಡ ಅಧಿಕಾರಿಗಳಿಗೂ, ನಮಗು ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮಸ್ಥೈರ್ಯ ನಿಮ್ಮಲ್ಲಿ ಮೂಡಿದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕ ಪೊಲೀಸರಿಗೆ ಆತ್ಮಸ್ಥೈರ್ಯವನ್ನು ಪಿ-ಕ್ಯಾಪ್ ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ‘ಪೊಲೀಸ್ ಸಿಬ್ಬಂದಿಗಳ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ’ ಹಾಗೂ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಉದ್ಘಾಟನೆ’ ಮತ್ತು ‘ಸನ್ಮಿತ್ರ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಡಿಯಾ ಜಸ್ಟೀಸ್ ರಿಪೋರ್ಟ್ ಪ್ರಕಾರ ಪೊಲೀಸ್ ಯಾವ ರೀತಿ ನಡೆದುಕೊಳ್ಳುತ್ತಿದೆ. ನಾಗರಿಕರಿಗೆ ನ್ಯಾಯ ಸಿಗುವುದು ಸೇರಿದಂತೆ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ಸಮೀಕ್ಷೆ ಮಾಡಿದ್ದಾರೆ. ಕರ್ನಾಟಕ ನಂಬರ್ ಒಂದನೇ ಸ್ಥಾನದಲ್ಲಿದೆ ಎಂದರು.
ಬ್ರಿಟೀಷರ ಕಾಲದಲ್ಲಿ ನಮ್ಮ ದೇಶದ ಪೊಲೀಸರಿಗೆ ಯಾವ ರೀತಿಯ ಸಮವಸ್ತ್ರ ಕೊಡುತ್ತಿದ್ದರು, ಯಾವ ರೀತಿಯಾಗಿ ನಡೆಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತಂದು, ನಡೆಸಿಕೊಂಡು ಬರಲಾಗಿದೆ.
ಬ್ರಿಟೀಷ್ ಕಾಲದಲ್ಲಿ ಸ್ಲೋಚ್ ಹ್ಯಾಟ್ ಹಾಕಿಕೊಳ್ಳುತ್ತಿದ್ದರು. 1953ರಲ್ಲಿ ಆರ್ಮ್ ಫೋರ್ಸ್‌ಗೆ ಹ್ಯಾಟ್ ಪರಿಚಯಿಸಲಾಯಿತು. ಸಾಮಾನ್ಯ ಪೊಲೀಸ್ ಸಿಬ್ಬಂದಿಗೆ ಟರ್ಬನ್ ಹಾಕುತ್ತಿದ್ದನ್ನು ಗಮನಿಸಿದ್ದೇವೆ.
1973ರಲ್ಲಿ ದೇವರಾಜು ಅರಸು ಸಿಎಂ ಆಗಿದ್ದಾಗ ನಮ್ಮ ಪೊಲೀಸ್ ಸಿಬ್ಬಂದಿಗೆ ಸ್ಲೋಚ್ ಹ್ಯಾಟ್ ಪರಿಚಯಿಸಿದರು. ಅಲ್ಲಿಂದ ಇಲ್ಲಿವರೆಗೆ ಯಾವುದೇ ಬದಲಾವಣೆ ಇಲ್ಲದೆ, ಕಷ್ಟನೋ, ಸುಖನೋ ನಮ್ಮ ಸಿಬ್ಬಂದಿಗಳು ಅನುಭವಿಸಿಕೊಂಡು ಬಂದಿದ್ದಾರೆ.
ಕ್ಯಾಪ್ ಬದಲಾವಣೆ ಮಾಡುವಂತೆ ಅನೇಕ ಬಾರಿ ಬೇಡಿಕೆಗಳು ಬಂದಿವೆ. ಮಳೆ ಬಂದಾಗ ಹೆಚ್ಚು ತೂಕ ಅಗುತ್ತದೆ. ನೋಡುವುದಕ್ಕು ಅಷ್ಟು ಸುಂದರವಾಗಿ ಕಾಣುವುದಿಲ್ಲ ಎಂಬ ಅಭಿಪ್ರಾಯಗಳು ಬಂದವು. 2015ರಲ್ಲಿ ನಾನು ಗೃಹ ಸಚಿವನಾಗಿದ್ದಾಗಲೂ ಬದಲಾವಣೆಯ ಪ್ರಸ್ತಾವನೆ ಬಂದಿತ್ತು. ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ.
ಈ ಬಾರಿ ಪ್ರಸ್ತಾವನೆ ಬಂದಾಗ ಚರ್ಚೆ ಮಾಡಿದಾಗ, ಇಲಾಖೆಯ ಹಿರಿಯ ಅಧಿಕಾರಿಗಳು, ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಕ್ಯಾಪ್ ಧರಿಸುತ್ತಾರೆ ಎಂಬ ಮಾಹಿತಿ ತರಿಸಿಕೊಂಡು ಕ್ಯಾಪ್‌ಗಳನ್ನು ಪ್ರದರ್ಶನ ಮಾಡಿದರು. ಸಿಎಂ ಅವರು ನೀಲಿ ಬಣ್ಣದ ಕ್ಯಾಪ್ ಆಯ್ಕೆ ಮಾಡಿದರು. ಇಲಾಖೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪೊಲೀಸ್ ಇಲಾಖೆಗೆ ಇಂದು ಐತಿಹಾಸಿಕ ದಿನ.
ಕ್ಯಾಪ್ ಧರಿಸಿದ ತಕ್ಷಣ ಎಷ್ಟು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಆತ್ಮಸ್ಥೈರ್ಯ ಬಂದಿದೆ. ನಾವು ಕೂಡ ಅಧಿಕಾರಿಗಳಿಗೂ, ನಮಗು ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮಸ್ಥೈರ್ಯ ನಿಮ್ಮಲ್ಲಿ ಮೂಡಿದೆ.
ಇಡೀ ದೇಶದಲ್ಲಿ ಬೇರೆ ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆ ಗಮನಿಸಿದರೆ, ಕರ್ನಾಟಕದಲ್ಲಿ ಹೆಚ್ಚಿನಂಶ ಶಾಂತಿಯಿಂದ ಇದೆ. ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಕೋಮು ಗಲಭೆಗಳು, ಅಹಿತಕರ ಘಟನೆಗಳನ್ನು ನಡೆಸಲು ಆಸ್ಪದ ನೀಡಿಲ್ಲ. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಟ್ಟಿಲ್ಲ. ಅದಕ್ಕೆ ಮುಖ್ಯ ಕಾರಣ ಇಲಾಖೆಯ ಸಿಬ್ಬಂದಿಗಳು ಎಂದರು.







