ಬೆಂಗಳೂರು : ಕಳೆದ ಹತ್ತು ವರ್ಷದಲ್ಲಿ 480 ಕ್ಕೂ ಹೆಚ್ಚು ವಿಪಕ್ಷ ಶಾಸಕರ ಮೇಲೆ ಐಟಿ- ಇಡಿ ಮೂಲಕ ದಾಳಿ ನಡೆಸಿ, ಬೆದರಿಸಿ ಅಪರೇಷನ್ ಮೂಲಕ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸಮರ್ಥವಾಗಿ ವಿರೋಧಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದೆ ಇದ್ದಾಗ ಕೇಂದ್ರ ಬಿಜೆಪಿ ಸರ್ಕಾರ ಐಟಿ-ಇಡಿ ಮೂಲಕ ಸಹಾಯಕ್ಕೆ ಬರುತ್ತದೆ. ಕಳೆದ ಹತ್ತು ವರ್ಷದಲ್ಲಿ 480 ಕ್ಕೂ ಹೆಚ್ಚು ವಿಪಕ್ಷ ಶಾಸಕರ ಮೇಲೆ ಐಟಿ- ಇಡಿ ಮೂಲಕ ದಾಳಿ ನಡೆಸಿ, ಬೆದರಿಸಿ ಅಪರೇಷನ್ ಮೂಲಕ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲದೆ ಮತ್ತೇನು. ಸಾಲು-ಸಾಲು ಹಗರಣಗಳನ್ನು ಹೊಂದಿರುವ ಬಿಜೆಪಿ ಶಾಸಕರು, ನಾಯಕರ ಮೇಲೆ ಐಟಿ -ಇಡಿ ದಾಳಿ ನಡೆದಿಲ್ಲ, ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ದಾಳಿ ಇಲ್ಲ, ಬಳ್ಳಾರಿ ರೆಡ್ಡಿ ಬ್ರದರ್ ಮೇಲೆ ಇದ್ದ ಕೇಸ್’ಗಳು ಬಿಜೆಪಿ ಸೇರಿದ ಕೊಡಲೇ ಎಲ್ಲವು ಖುಲಾಸೆ ಆಗಿದೆ. ಹೀಗೆ ಕೇಂದ್ರ ಸಚಿವರುಗಳು, ಮಾಜಿ ಮುಖ್ಯಮಂತ್ರಿಗಳು ಸಾಲು ಸಾಲು ಹಗರಣಗಳಲ್ಲಿ ಸಿಕ್ಕಿ ಬಿದ್ದರು ಸಹ ಯಾವುದೇ ಇಡಿ ದಾಳಿಯಾಗುತ್ತಿಲ್ಲ. ಇದಲ್ಲದೆ ದೇಶದ 14 ವಿರೋಧ ಪಕ್ಷಗಳು ಇಡಿ ವಿರುದ್ಧ ನ್ಯಾಯಾಲಯದ ಪ್ರಕರಣ ದಾಖಲಿಸಿದ್ದಾರೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಉತ್ತರ ನೀಡದೆ 115 ವಿಪಕ್ಷ ನಾಯಕರ ಮೇಲೆ ದಾಳಿ ನಡೆಸಿ ದ್ವೇಷದ ರಾಜಕಾರಣವನ್ನು ಮುಂದುವರೆಸುತ್ತಿದ್ದಾರೆ. ವಾಲ್ಮೀಕಿ ಹರಣದ ಮೇಲೆ ಇಷ್ಟರ ಮಟ್ಟಿಗೆ ಆಸಕ್ತಿ ತೋರಿಸುತ್ತಿರುವ ಐಟಿ – ಇಡಿ ಯವರಿಗೆ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕೇಸ್ʼಗಳನ್ನು ನಿರ್ಲಕ್ಷ್ಯಿಸಿದ್ದು ಯಾಕೆ?
– ಭೋವಿ ಅಭಿವೃದ್ಧಿ ನಿಗಮದಲ್ಲಿ ₹77 ಕೋಟಿ ಎಸ್. ಬ್ಯಾಂಕ್ ವರ್ಗಾವಣೆ
– APMC ₹47.16 ಕೋಟಿ ಸಿಂಡಿಕೇಟ್ ಬ್ಯಾಂಕ್ ವರ್ಗಾವಣೆ
– ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ₹23 ಕೋಟಿ SBI ವರ್ಗಾವಣೆ
– ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ₹5 ಕೋಟಿ ಹಗರಣ
– ದೇವರಾಜ್ ಅರಸು ಟರ್ಮಿನಲ್ ₹47 ಕೋಟಿ ಹಗರಣ
ಹೀಗೆ ಭ್ರಷ್ಟಾಚಾರ ಹಗರಣಗಳ ಸರಮಾಲೆಯನ್ನು ಹಾಕಿಕೊಂಡಿರುವ ಬಿಜೆಪಿಯವರು ಈ ಪ್ರಕರಣಗಳ ಬಗ್ಗೆ ಪ್ರಸ್ತಾವನ್ನೆಯನ್ನೇ ಮಾಡದಿರುವುದು ನಾಚಿಕೆಗೇಡು. ಕೇಂದ್ರ ಸರ್ಕಾರದ ಒತ್ತಡದಿಂದ ಐಟಿ – ಇಡಿ ಅಧಿಕಾರಿಗಳು ರಾಜ್ಯ ಸರ್ಕಾರದ ಮೇಲೆ ಸಂಚು ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಇಂತಹ ಬೆದರಿಕೆಗಳನ್ನು ಸವಾಲಾಗಿ ಸ್ವೀಕರಿಸಿಕೊಂಡು ಬಂದಿದ್ದೇವೆ. ಈಗ ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ. ಇಂತಹ ಬೆದರಿಕೆಗಳಿಗೆ ಹೆದರುವ ಮಾತೇ ಇಲ್ಲ. ಬಿಜೆಪಿಗರು ಎಷ್ಟೇ ಸುಳ್ಳು ಅಪಪ್ರಚಾರ ನಡೆಸಿದರು ಸರ್ಕಾರದ ಪರವಾಗಿ ನಾಡಿನ ಜನರು ನಿಂತಿದ್ದಾರೆ ನೆನಪಿರಲಿ ಎಂದು ಹೇಳಿದ್ದಾರೆ.