ಅಬುಜಾ: ನೈಜೀರಿಯಾದ ಈಶಾನ್ಯ ಭಾಗದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ನೈಜೀರಿಯಾ ವಾಯುಪಡೆ ನಡೆಸಿದ ವೈಮಾನಿಕ ದಾಳಿಯು ಗುರಿ ತಪ್ಪಿ ಸ್ಥಳೀಯ ಮಾರುಕಟ್ಟೆಗೆ ಅಪ್ಪಳಿಸಿದೆ. ಈ ಘೋರ ದುರಂತದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಂದಿ ಅಮಾಯಕರು ಮೃತಪಟ್ಟಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ನೈಜೀರಿಯಾದ ಯೋಬೆ (Yobe) ಮತ್ತು ಬೊರ್ನೊ ಪ್ರಾಂತ್ಯದ ಗಡಿಯಲ್ಲಿರುವ ಜಿಲ್ಲಿ (Jilli) ಎಂಬ ಹಳ್ಳಿಯ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.ಬೊಕೊ ಹರಾಮ್ ಉಗ್ರರು ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ವಾಯುಪಡೆ ದಾಳಿ ನಡೆಸಿತ್ತು. ಆದರೆ, ದಾಳಿಯ ವೇಳೆ ಮಾರುಕಟ್ಟೆಯು ವ್ಯಾಪಾರಸ್ಥರು ಮತ್ತು ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು.
ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಕಾರ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ ಸ್ಥಳೀಯ ಮೂಲಗಳು ಸಾವಿನ ಸಂಖ್ಯೆ 200 ದಾಟಿರಬಹುದು ಎಂದು ಅಂದಾಜಿಸಿವೆ. ಸರಿಸುಮಾರು 35ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.








