ಬೆಂಗಳೂರು: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ತಂಡಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಈ ಬಾರಿ ಅವರು ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಬೆಂಗಳೂರು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಕನ್ನಡದಲ್ಲಿ ಮಲ್ಯ ಸಂದೇಶ:
ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಲ್ಯ, “ಬೆಂಗಳೂರಿನ ಸಿಂಹಗಳ ಪಾಲಿನ ದಿನ ಕೊನೆಗೂ ಬಂದೇ ಬಿಟ್ಟಿತು. ನಮ್ಮ ಸಿಂಹಗಳು… ಐಪಿಎಲ್ ಚಾಂಪಿಯನ್ಸ್. ಗುಡ್ ಲಕ್ ಅಂಡ್ ಪ್ಲೇ ಬೋಲ್ಡ್, ಧೈರ್ಯವಾಗಿ ಆಟವಾಡಿ” ಎಂದು ಬರೆದುಕೊಂಡಿದ್ದಾರೆ. ಅವರ ಈ ‘ಧೈರ್ಯವಾಗಿ ಆಟವಾಡಿ’ ಎಂಬ ಅಪ್ಪಟ ಕನ್ನಡದ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
The Day has arrived for our Lions of Bengaluru…namma sinhagulu…IPL Champions. Good Luck and Play Bold…Dhairyadinda ațavadi.
— Vijay Mallya (@TheVijayMallya) March 28, 2026
ಬದಲಾದ ಮಾಲೀಕತ್ವ – ಸ್ಥಿರವಾದ ಪ್ರೀತಿ:
ಇತ್ತೀಚೆಗಷ್ಟೇ ಆರ್ಸಿಬಿ ತಂಡದ ಮಾಲೀಕತ್ವದಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ದಾಖಲೆಯ 16,700 ಕೋಟಿ ರೂ. ಮೊತ್ತಕ್ಕೆ ಫ್ರಾಂಚೈಸಿಯನ್ನು ಖರೀದಿಸಿದೆ. ಈ ಬೆಳವಣಿಗೆಯ ನಡುವೆಯೂ ಮಲ್ಯ ಅವರು ತಂಡದ ಮೇಲಿನ ತಮ್ಮ ಮಮಕಾರವನ್ನು ಮುಂದುವರಿಸಿದ್ದಾರೆ. 2008ರಲ್ಲಿ ಕೇವಲ 450 ಕೋಟಿ ರೂ.ಗೆ ತಾವು ಖರೀದಿಸಿದ್ದ ತಂಡವು ಇಂದು ಇಷ್ಟೊಂದು ಬೃಹತ್ ಮೌಲ್ಯ ಪಡೆದಿರುವುದಕ್ಕೆ ಅವರು ಇತ್ತೀಚೆಗಷ್ಟೇ ಸಂತಸ ವ್ಯಕ್ತಪಡಿಸಿದ್ದರು.
ಅಭಿಮಾನಿಗಳ ಪ್ರತಿಕ್ರಿಯೆ:
ಮಲ್ಯ ಅವರ ಕನ್ನಡದ ಟ್ವೀಟ್ ಕಂಡ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. “ತಂಡ ಯಾರ ಕೈಗೇ ಹೋದರೂ ಮಲ್ಯ ಅವರ ‘ಪ್ಲೇ ಬೋಲ್ಡ್’ ಮಂತ್ರ ಮಾತ್ರ ಬದಲಾಗಿಲ್ಲ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ಸೀಸನ್ನಲ್ಲಿ (2025) ಆರ್ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದನ್ನು ನೆನಪಿಸಿಕೊಂಡಿರುವ ಅಭಿಮಾನಿಗಳು, ಈ ಬಾರಿಯೂ ಹಾಲಿ ಚಾಂಪಿಯನ್ ಆಗಿ ಶುಭಾರಂಭ ಮಾಡಲಿ ಎಂದು ಆಶಿಸುತ್ತಿದ್ದಾರೆ.
ಇಂದು (ಮಾರ್ಚ್ 28) ರಾತ್ರಿ 7:30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಎಸ್ಆರ್ಹೆಚ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ನನಗೆ ‘IPL ಟಿಕೆಟ್’ ಬೇಡ: ವಿಐಪಿ ಸಂಸ್ಕೃತಿ ವಿರುದ್ಧ ಗುಡುಗಿದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್!
ಇಂದು ‘IPL ಪಂದ್ಯಾವಳಿ’ ಹಿನ್ನಲೆ: ಬೆಂಗಳೂರಲ್ಲಿ ಬಿಎಂಟಿಸಿಯಿಂದ ಹೆಚ್ಚುವರಿ ‘ಬಸ್ ಸಂಚಾರ’ದ ವ್ಯವಸ್ಥೆ








