ಬೆಂಗಳೂರು: “ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳಿಂದ ಸಮಸ್ಯೆ ಹೆಚ್ಚಾಗಿದ್ದು, ನಮ್ಮ ಸರ್ಕಾರ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಸಿಸಿ, ಒಸಿ ಕಡ್ಡಾಯ ವಿಚಾರದಲ್ಲಿ ಸುಪ್ರೀಂ ಕೋರ್ಟ ಆದೇಶ ಪಾಲನೆ ಜೊತೆಗೆ, ಕಾನೂನು ಚೌಕಟ್ಟಿನಲ್ಲಿ ಜನಸಾಮಾನ್ಯರಿಗೆ ವಿನಾಯಿತಿ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ಅಶ್ವತ್ ನಾರಾಯಣ ಅವರು ಸಿಸಿ ಹಾಗೂ ಒಸಿ ಆಧಾರಿತವಾಗಿ ಎಸ್ಕಾಂಗಳು ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ನೀರಿನ ಸಂಪರ್ಕ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವ ವಿಚಾರವನ್ನು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಈ ವಿಚಾರಕ್ಕೆ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಇದು ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರ. ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪಾಲಿಕೆ, ಪಂಚಾಯ್ತಿಗೆ ಸೇರಿದ ವಿಚಾರ. ನಿಯಂತ್ರಣ ಪ್ರಾಧಿಕಾರದವರು (regulatory authority) ಈ ತೀರ್ಪನ್ನು ಜಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಇದಾದ ನಂತರ ಇದರ ಮೇಲೆ ಮೇಲ್ಮನವಿ ಸಲ್ಲಿಸಲಾಯಿತು. ಅಶ್ವತ್ ನಾರಾಯಣ ಅವರು ಇದನ್ನು ಸಡಿಲಗೊಳಿಸಲಾಗಿದೆ ಎಂದು ಸದನದಲ್ಲಿ ತಿಳಿಸಿದರು. ನಾನು ಅದರ ಪ್ರತಿಯನ್ನು ನೀಡಿ, ನಮಗೆ ತೀರ್ಮಾನ ಮಾಡಲು ನೆರವಾಗುತ್ತದೆ ಎಂದು ಕೇಳಿದೆ. ಬೆಳಗ್ಗೆ ನಡೆದ ಚರ್ಚೆಯಲ್ಲಿ ಅವರು ಅದನ್ನು ಹುಡುಕಿದರು ಆದರೆ ಸಿಗಲಿಲ್ಲ. ಈಗಲಾದಲೂ ಸಲ್ಲಿಕೆ ಮಾಡುತ್ತಾರೆ ಎಂದು ಭಾವಿಸಿದೆ. ಆದರೆ ಈಗಲೂ ಅದನ್ನು ನೀಡಿಲ್ಲ” ಎಂದರು.
ಬೇರೆ ರಾಜ್ಯಗಳಂತೆ ನಾವು ಬಲಿಷ್ಠವಿಲ್ಲ!
“ನಿಯಂತ್ರಣ ಪ್ರಾಧಿಕಾರದವರು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಬೆಸ್ಕಾಂಗೆ ಪತ್ರ ಬರೆದು ಒಸಿ ಹಾಗೂ ಸಿಸಿ ಸಲ್ಲಿಕೆ ನಂತರವೇ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಸೂಚಿಸಿದರು. ನಾನು, ಮುಖ್ಯಮಂತ್ರಿಗಳು, ಇಂಧನ ಸಚಿವರಾದ ಕೆ.ಜೆ ಜಾರ್ಜ್ ಸೇರಿ ಚರ್ಚೆ ಮಾಡಿದೆವು. ಈ ಸಮಸ್ಯೆ ನಿವಾರಣೆ ಮಾಡಬೇಕು ಎಂಬ ಪ್ರಯತ್ನ ನಮ್ಮ ಕಡೆಯಿಂದ ನಡೆಯುತ್ತಿದೆ. ಬೇರೆ ರಾಜ್ಯಗಳು ಜಾರಿ ಮಾಡಿಲ್ಲ, ನಾವು ಯಾಕೆ ಮಾಡಬೇಕು ಎಂದು ವಿರೋಧ ಪಕ್ಷದ ಶಾಸಕರು ಕೇಳಿದರು. ನಾವು ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳ ರೀತಿ ಬಲಿಷ್ಠವಾಗಿಲ್ಲ. ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಸರ್ಕಾರ ನಿಮ್ಮದೇ ಇದೆ. ಹೀಗಾಗಿ ಅಲ್ಲಿ ಜಾರಿ ಮಾಡದಿದ್ದರೂ ಏನೂ ಮಾತನಾಡುವುದಿಲ್ಲ. ನಾವು ನ್ಯಾಯಾಲಯದ ಆದೇಶದ ವಿರುದ್ಧ ಹೋದರೆ ನಮ್ಮ ವಿರುದ್ಧ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿ ನಮಗೆ ಹಾಗೂ ನಮ್ಮ ಅಧಿಕಾರಿಗಳಿಗೆ ತೊಂದರೆಯಾಗಲಿದೆ” ಎಂದು ತಿಳಿಸಿದರು.
ಅಕ್ರಮ ಕಟ್ಟಡಗಳಿಂದ ಬೆಂಗಳೂರಿಗೆ ಹೆಚ್ಚು ಅಪಾಯ
“ಯಾವುದೇ ಅಕ್ರಮ ಕಟ್ಟಡ ನಿರ್ಮಾಣಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಈ ತೀರ್ಪು ಬರುವ ಮುನ್ನ ಅರ್ಜಿ ಹಾಕಿ ಮನೆ ಕಟ್ಟಿರುವ ಬಡವರೂ ಇದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಇವರಿಗೆ ಯಾವ ರೀತಿ ನೆರವು ನೀಡಬಹುದು ಎಂದು ಪರಿಹಾರ ಕಂಡುಕೊಳ್ಳಲಾಗಿದೆ. ಹಾಗೆಂದು ಯಾರು ಎಷ್ಟು ಮಹಡಿ ಬೇಕಾದರೂ ಕಟ್ಟಲು ಅವಕಾಶವಿಲ್ಲ. ನಾನು ಇತ್ತೀಚೆಗಷ್ಟೇ ನಗರ್ತಪೇಟೆಗೆ ಹೋಗಿದ್ದೆ. ಅಲ್ಲಿ 20X25 ಅಡಿ ಜಾಗದಲ್ಲಿ ಎಂಟು ಮಹಡಿ ಕಟ್ಟಡ ನಿರ್ಮಿಸಿದ್ದಾರೆ. ಅಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜನ ಸತ್ತಿದ್ದಾರೆ. ಬೆಂಗಳೂರಿಗೆ ಇದು ದೊಡ್ಡ ಅಪಾಯಕಾರಿ ವಿಚಾರ. ಈ ಕೋರ್ಟ್ ಆದೇಶದಿಂದಾದರೂ ಮುಂದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಯಲು ನಮ್ಮ ಬಳಿ ಅಕಾಶವಿದೆ. ಈ ರೀತಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ನಾವುಗಳು ಪ್ರೋತ್ಸಾಹ ನೀಡಬಾರದು. ಕೋರ್ಟ್ ಆದೇಶ ಪಾಲನ ಜೊತೆಗೆ ಕಾನೂನು ಚೌಕಟ್ಟಿನಲ್ಲಿ ಸ್ವಲ್ಪ ಸಡಿಲಿಕೆ, ವಿನಾಯಿತಿ ನೀಡಲು ಅನೇಕ ಕ್ರಮ ಕೈಗೊಳ್ಳಲಾಗಿದೆ” ಎಂದರು.
“ನಾನು ಸಣ್ಣ ವಯಸ್ಸಿನಿಂದ ಬೆಂಗಳೂರಿನಲ್ಲಿದ್ದು, ನನಗೆ ಬೆಂಗಳೂರಿನ ಸಮಸ್ಯೆಗಳು ಗೊತ್ತಿವೆ. ಇಲ್ಲಿನ ಕಾನೂನುಗಳು ಗೊತ್ತಿವೆ. ಬಡವರಿಗೆ ಯಾವ ರೀತಿ ನೆರವಾಗಬಹುದು ಎಂದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನನ್ನ ಸಹೋದ್ಯೋಗಿಗಳ ಅಭಿಪ್ರಾಯವನ್ನು ಪಡೆದು ನಂತರ ತೀರ್ಮಾನ ಮಾಡಲಾಗುವುದು. ನಿಮ್ಮ ಸಹಾನುಭೂತಿಯಂತೆ ನಾವು ಸಹಕಾರ ನೀಡಲು ಸಿದ್ಧವಿದ್ದೇವೆ. ಈ ಸರ್ಕಾರ ಜನ ಸಾಮಾನ್ಯರ ಪರವಾಗಿದೆ ಎಂಬುದಂತು ಸ್ಪಷ್ಟ” ಎಂದು ತಿಳಿಸಿದರು.
ಅತ್ತಿಬೆಲೆವರೆಗೂ ಮೆಟ್ರೋ ವಿಸ್ತರಣೆಗೆ ಅಗತ್ಯ ಕ್ರಮ
ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಬಿ.ಶಿವಣ್ಣ ಅವರು, ನಮಗೆ ಹೊಸೂರು ಭಾಗದಿಂದ ಹೆಚ್ಚು ಸಂಚಾರ ದಟ್ಟಣೆ ಬರುತ್ತಿದ್ದು, ಇದನ್ನು ಕಡಿಮೆ ಮಾಡಲು ಅತ್ತಿಬೆಲೆ ಗಡಿವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕು ಎಂದು ಕೇಳಿದರು. “ಶಿವಣ್ಣ ಅವರು ಕಳೆದ ಎರಡು ವರ್ಷಗಳಿಂದ ಈ ವಿಚಾರವಾಗಿ ನನ್ನ ಬೆನ್ನತ್ತಿದ್ದಾರೆ. ಇತ್ತೀಚೆಗೆ ಪ್ರಧಾನಮಂತ್ರಿಗಳು ಹಳದಿ ಮಾರ್ಗಕ್ಕೆ ಚಾಲನೆ ನೀಡಿದರು. ಅವರ ಬೇಡಿಕೆ ಪ್ರಕಾರ ಇನ್ನು 10-12 ಕಿ.ಮೀ ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ಇದರ ಅಗತ್ಯವಿದೆ. ಇತ್ತೀಚೆಗೆ ಅವರ ಕ್ಷೇತ್ರದಲ್ಲಿ 90 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣ ಮಾಡಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಅಲ್ಲಿಯವರೆಗೂ ಮೆಟ್ರೋ ತೆಗೆದುಕೊಂಡು ಹೋಗಬೇಕು. ಈ ಮಾರ್ಗವನ್ನು ಜಿಗಣಿ, ಬನ್ನೇರುಘಟ್ಟ ಮಾರ್ಗವಾಗಿ ತೆಗೆದುಕೊಂಡು ಹೋಗಲು ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಶಾಸಕರು ಪ್ರಸ್ತಾಪಿಸಿರುವ ಮೆಟ್ರೋ ಮಾರ್ಗಕ್ಕೆ ಹೈದರಾಬಾದ್ ನ ಆರ್.ವಿ ಅಸೋಸಿಯೇಟ್ಸ್ ಸಂಸ್ಥೆಗೆ ಡಿಪಿಆರ್ ಸಿದ್ಧಪಡಿಸಲು ತಿಳಿಸಿದ್ದೇವೆ. ಹಳದಿ ಮಾರ್ಗದ ಮೆಟ್ರೋದಲ್ಲಿ ನಿತ್ಯ 90 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಶಾಸಕರ ಮನವಿ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.