ಮಂಡ್ಯ: ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು; ನಮ್ಮ ವಂಶ ಬಡತನದಿಂದ ಕಷ್ಟಸುಖ ಅರಿತು ಮೇಲೆ ಬಂದಿದೆ. ನಮ್ಮ ವಂಶಕ್ಕೆ ಈ ಕಣ್ಣೀರು ಬಳುವಳಿಯಾಗಿ ಬಂದಿದೆ ಎಂದರು.
ಪಾಂಡವಪುರದ ಚಿನಕುರುಳಿ ಗ್ರಾಮದಲ್ಲಿ ಮಾಜಿ ಪ್ರಧಾನಿಗಳು ಮಾಧ್ಯಮಗಳ ಜತೆ ಮಾತನಾಡಿದರು. ಕಣ್ಣೀರ ಬಗ್ಗೆ ವ್ಯಂಗ್ಯವಾಡ್ತಿರೋ ಕೈ ನಾಯಕರ ವಿರುದ್ದ ಹರಿಹಾಯ್ದ ದೇವೇಗೌಡರು; ತಮ್ಮ ಬದುಕಿನ ಹಸಿವು, ಕಣ್ಣೀರನ್ನು ಅವರು ನೆನಪು ಮಾಡಿಕೊಂಡರು.
ನಮಗೆ ರೈತರ, ಬಡ ಜನರ ಕಷ್ಟ ಸುಖಗಳ ಅರಿವಿದೆ. ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ಯಾರಿಗಿರುತ್ತೋ ಅವರಿಗೆ ಮಾತೃ ಹೃದಯ ಇರುತ್ತೆ. ಕಣ್ಣೀರಿನ ಬಗ್ಗೆ ವ್ಯಂಗ್ಯ ಮಾಡುವ ಜನರಿಗೆ ನಾನು ಇನ್ನೇನು ಹೇಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ನಾನು ನನ್ನ ಕಡೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರ್ತಿನಿ. ಮೊಮ್ಮಗನಿಗಾಗಿ ಈಗ ನಾನು ರಾಜಕೀಯಕ್ಕೆ ಬಂದಿಲ್ಲ. ಒಂದು ಪ್ರಾದೇಶಿಕ ಪಕ್ಷ ಉಳಿಸಲು ನಾನು ಬಂದಿದ್ದೀನಿ. ಈ ಸರ್ಕಾರ ತೆಗೆಯುವವರೆಗೂ ನಾನು ನಿದ್ದೆ ಮಾಡಲ್ಲ. ಮೊಮ್ಮಗ ನಿಖಿಲ್ ಗೆದ್ದ ಮೇಲೆಯೂ ನಾನು ಮನೆಯಲ್ಲಿ ಮಲಗಲ್ಲ. ಆಮೇಲೆ ಕೂಡ ಹೋರಾಟ ಪಕ್ಷ ಕಟ್ಟುತ್ತೇನೆ ಎಂದರು.
ಡಿಕೆ ಶಿವಕುಮಾರ್ ಅವರು ಕಣ್ಣೀರು ಹಾಕಿರೋದು ಯಾವತ್ತಾದರೂ ನೋಡಿದ್ದೀರಾ?
ಡಿಕೆ ಶಿವಕುಮಾರ್ ಅವರು ಕಣ್ಣೀರು ಹಾಕಿರೋದು ಯಾವತ್ತಾದರೂ ನೋಡಿದ್ದೀರಾ?ಕೊತ್ವಾಲ್ ರಾಮಚಂದ್ರನಿಂದ 100 ರೂಪಾಯಿಗೆ ಕೆಲಸ ಶುರು ಮಾಡಿದ್ದು ಈ ಡಿಕೆಶಿ. ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಅಂತಹವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂತಹ ಪಕ್ಷದ ಅಧ್ಯಕ್ಷರಾಗಿರುವ ಡಿಕೆ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ? ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿನೂ ಕಣ್ಣೀರು ಹಾಕಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತದೆ. ಅಂತವರಿಗೆ ಕಣ್ಣೀರು ಬರುತ್ತದೆ. ನನ್ನ ಮೊಮ್ಮಗ ಕಣ್ಣೀರು ಹಾಕಿದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಮ್ಮ ಅಪ್ಪನಿಂದಲೇ ನಮಗೆ ಕಣ್ಣೀರು ಹಾಕೋದು ಬಂದಿದೆ. ಬಡತನವನ್ನು ನಾವು ಅನುಭವಿಸಿದ್ದೇವೆ. ಬಡವರ ಬಗ್ಗೆ ನಮಗೆ ಬೇಗೆ, ನೋವು ಇದೆ ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು.
ಡಿಸಿಎಂ ಡಿಕೆಶಿ ಅವರು ಚನ್ನಪಟ್ಟಣದಲ್ಲಿ 6 ತಿಂಗಳು ಪ್ರವಾಸ ಮಾಡಿದರು. ಅವರೇ ಪಾರ್ಟಿ ಅಧ್ಯಕ್ಷರು, ಅವರೇ ಬಿ ಫಾರಂ ಕೊಡೋದು. ಕನಕಪುರದ ಎಂಎಲ್ಎ, ಮಂತ್ರಿಯಾದವರು ನಾನೇ ನಿಲ್ತೀನಿ ಎಂದಿದ್ದರು. ಅವರ ತಲೆಯಲ್ಲಿ ಏನೇನೂ ಇದ್ಯೋ. ಹೆಚ್ಡಿಕೆ ವರ್ಸಸ್ ಡಿಕೆ ಅಂತ ದಿನ ಚರ್ಚೆಯಾಗ್ತಿದೆ. ರಾಮನಗರವನ್ನು ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ರಾಮನಗರವನ್ನು ಬೆಂಗಳೂರಿಗೆ ಸೇರಿಸ್ತೀನಿ, ಜನರಿಗೆ ಅನುಕೂಲ ಆಗುತ್ತೆ ಎನ್ನುತ್ತಿದ್ದಾರೆ. ಅವರು ರಾಮನಗರವನ್ನು ಉದ್ಧಾರ ಮಾಡುತ್ತಾರಂತೆ ಎಂದು ಮಾಜಿ ಪ್ರಧಾನಿಗಳು ವ್ಯಂಗ್ಯವಾಡಿದರು.
ಡಿಕೆಯನ್ನ ಹೆಚ್ಡಿಕೆಗೆ ಕಂಪೈರ್ ಮಾಡೋದು ಸರಿಯಲ್ಲ. ಮೋದಿ ಅವರು ಕರೆದು ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅಂತಹ ವ್ಯಕ್ತಿತ್ವವನ್ನ ಕುಮಾರಸ್ವಾಮಿ ಬೆಳೆಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಹಾಜನತೆ ಹಣ ಹಾಕಿ ಹೆಚ್ಡಿಕೆ ಗೆಲುವಿಗೆ ದುಡಿದರು. ಕುಮಾರಸ್ವಾಮಿ ಸೋಲಿಸಲು ಎದುರಾಳಿ ಕಂಟ್ರಾಕ್ಟರ್ ಗೆ 120 ಕೋಟಿ ಹಣವನ್ನ ರಿಲೀಸ್ ಮಾಡ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಸಮಾಜದ ₹80 ಕೋಟಿ ತೆಗೆದುಕೊಂಡು ತೆಲಂಗಾಣ ಎಲೆಕ್ಷನ್ ಗೆ ಖರ್ಚು ಮಾಡಿದರು. ಬಡಬಗ್ಗರ ಹಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನನಗೆ 92 ವರ್ಷ, ನಿಖಿಲ್ ಗೆದ್ದ ಬಳಿಕ ಮಲಗಲ್ಲ. ಈ ಸರ್ಕಾರವನ್ನು ತೆಗೆಯುವವರೆಗೂ ಮಲಗಲ್ಲ. 62 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ನೋಡಿಲ್ಲ. ಈ ರಾಜ್ಯ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಪ್ರಾದೇಶಿಕ ಪಕ್ಷವನ್ನು ಎನ್ ಡಿಎ ಜೊತೆ ಸೇರಿಸಿದ್ದೇನೆ. ಮೋದಿ ನಾಯಕತ್ವಕ್ಕೆ ಸಾಟಿಯಾಗುವ ಒಬ್ಬ ನಾಯಕ INDIA ನಲ್ಲಿ ಇಲ್ಲ. ಮೋದಿ ಅವರನ್ನು ಎದುರಿಸುತ್ತೇನೆ ಎನ್ನುವ ಒಬ್ಬ ನಾಯಕ ಇಲ್ಲ. ರಾಷ್ಟ್ರದ ಶ್ರೇಯೋಭಿವೃದ್ದಿಗೆ ಡೊನಾಲ್ಡ್ ಟ್ರಂಪ್, ಮೋದಿ ಅವರುಗಳು ಗೆದ್ದಿದ್ದಾರೆ. ಮೋದಿ, ಟ್ರಂಪ್ ಸಂಬಂಧ ಚೆನ್ನಾಗಿದೆ. ಎದುರಾಳಿಗಳನ್ನು ಎದುರಿಸಲು ಈ ಸಂಬಂಧ, ವ್ಯಕ್ತಿತ್ವ ನಾಯಕತ್ವ ಕೆಲಸ ಮಾಡುತ್ತದೆ ಎಂದು ಅವರು ಆಶಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕ ಮಂಜುನಾಥ್, ಚಿಕ್ಕ ಸೋಮಣ್ಣ ಮುಂತಾದವರು ಉಪಸ್ಥಿತರಿದ್ದರು.