ಬೆಂಗಳೂರು : “ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಕೇಂದ್ರ ಬಿಜೆಪಿ ಸರ್ಕಾರ, ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಎಐಸಿಸಿಗೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ಜಾರಿ ಮಾಡಿರುವ ಬಗ್ಗೆ ಕೇಳಿದಾಗ ಅವರು ಶನಿವಾರ ಉತ್ತರಿಸಿದ್ದು ಹೀಗೆ;
“1800 ಕೋಟಿ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೊಟೀಸ್ ಜಾರಿ ಮಾಡಿದೆ. ಇದು ಪ್ರಜಾಪ್ರಭುತ್ವ ದೇಶ. ಆದರೂ ಬಿಜೆಪಿ ಸರ್ಕಾರ ಅಧಿಕಾರಿಗಳ ಮೂಲಕ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ. ಸೂರ್ಯ ಮುಳುಗುತ್ತಾನೆ, ಮತ್ತೆ ಹುಟ್ಟುತ್ತಾನೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಸರ್ಕಾರ ಬೆದರಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರಿಗೆ ಅರಿವಾಗಿದೆ. ಹೀಗಾಗಿ ಅವರು ಎಲ್ಲರಿಗೂ ಕಿರುಕುಳ ನೀಡುತ್ತಿದ್ದಾರೆ.
ನನಗೂ ನೊಟೀಸ್ ಬಂದಿದೆ:
ನನ್ನ ವಿರುದ್ಧದ ಪ್ರಕರಣ ಮುಕ್ತಾಯವಾಗಿದ್ದರೂ ನಿನ್ನೆ ರಾತ್ರಿ ನನಗೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ಜಾರಿ ಮಾಡಲಾಗಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಹಾಲಿ ಕೇಂದ್ರ ಸಚಿವರು ಸೇರಿದಂತೆ ಅನೇಕ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಆ ಪ್ರಕರಣಗಳಲ್ಲಿ ಯಾವುದೇ ವಿಚಾರಣೆ, ನೊಟೀಸ್, ಆರೋಪಪಟ್ಟಿ ಸಲ್ಲಿಕೆ, ಕ್ರಮ ಇಲ್ಲವಾಗಿದೆ. ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಬಿಜೆಪಿ ಸೇರಿದರೆ ಮಾತ್ರ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಅವರ ವಿರುದ್ಧ ಪ್ರಕರಣ ಮುಚ್ಚಿಹಾಕಲಾಗುತ್ತದೆ” ಎಂದು ತಿಳಿಸಿದರು.
ಈಗ ಮಾತನಾಡುತ್ತಿರುವವರು ಕೋವಿಡ್ ಸಮಯದಲ್ಲಿ ಎಲ್ಲಿದ್ದರು?
ಕೇಂದ್ರ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಡಿ.ಕೆ. ಸಹೋದರರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಶತ್ರಗಳು, ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಅಧಿಕಾರ. ನಮಗೆ ಇದು ಹೊಸತಲ್ಲ. ಅಮಿತ್ ಶಾ ಅವರಾದರೂ ಬರಲಿ, ಸನ್ಮಾನ್ಯ ಪ್ರಧಾನಮಂತ್ರಿಗಳಾದರೂ ಬರಲಿ. ನಾವು ರಾಜಕೀಯವಾಗಿ ದೇವೇಗೌಡರು, ಅವರ ಪುತ್ರ ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗನನ್ನು ಎದುರಿಸಿದ್ದೇವೆ. ನಮ್ಮ ಜನಕ್ಕೆ ಪ್ರಜ್ಞೆ ಇದೆ. ಕೋವಿಡ್ ಸಮಯದಲ್ಲಿ ಸುರೇಶ್ ಹೊರತಾಗಿ ರಾಜ್ಯ ಮತ್ತು ದೇಶದಲ್ಲೇ ಕೋವಿಡ್ ಶವಗಳನ್ನು ಮಣ್ಣು ಮಾಡಿದ ಮತ್ತೊಬ್ಬ ನಾಯಕ ಇಲ್ಲ. ಈಗ ಮಾತನಾಡುತ್ತಿರುವವರು ಆಗ ಎಲ್ಲಿ ಹೋಗಿದ್ದರು? ಮನೆ ಮನೆಗೆ ಔಷಧಿ, ಆಹಾರ ಕಿಟ್ ನೀಡಿದ್ದು ಈಗ ಮಾತನಾಡುತ್ತಿರುವವರಲ್ಲ. ಕೇವಲ ಕಾಂಗ್ರೆಸ್ ಮತ್ತು ಸುರೇಶ್ ಮಾತ್ರ” ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕಲ್ಲು ವರ್ಸಸ್ ಹೃದಯ, ದರೋಡೆ ವರ್ಸಸ್ ಹೃದಯವಂತ ಎಂದು ಬಿಂಬಿಸುತ್ತಿರುವ ಬಗ್ಗೆ ಕೇಳಿದಾಗ, “ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ” ಎಂದು ತಿರುಗೇಟು ನೀಡಿದರು.
ಪಕ್ಷದ ಲಕ್ಷ್ಮಣ ರೇಖೆ ಯಾರೂ ದಾಟುವಂತಿಲ್ಲ:
ಕೋಲಾರದ ಅಭ್ಯರ್ಥಿ ಘೋಷಣೆಯಾಗಿರುವ ಬಗ್ಗೆ ಕೇಳಿದಾಗ, “ನಾನು ಮುನಿಯಪ್ಪ, ಬೇರೆ ನಾಯಕರ ಜತೆ ಚರ್ಚೆ ಮಾಡಿದ್ದು, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಗುಂಪು ರಾಜಕೀಯಕ್ಕೆ ಅವಕಾಶವಿಲ್ಲ. ಶಿಸ್ತು ಇಲ್ಲಿ ಬಹಳ ಮುಖ್ಯ. ಯಾವುದೇ ಸಚಿವರು, ಶಾಸಕರು ಪಕ್ಷದ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ಗೆಲ್ಲುವುದು ಬಿಡುವುದು ಬೇರೆ ವಿಚಾರ. ಪಕ್ಷದಲ್ಲಿ ಶಿಸ್ತು ಕಾಪಾಡಿ ರಾಜ್ಯ ಹಾಗೂ ಪಕ್ಷದ ಹಿತಕ್ಕೆ ಕೆಲಸ ಮಾಡಬೇಕು. ವಿರೋಧ ವ್ಯಕ್ತಪಡಿಸಿದ ನಾಯಕರು ಕ್ಷಮೆ ಕೇಳಿದ್ದಾರೆ, ಮುನಿಯಪ್ಪ, ಸಚಿವ ಸುಧಾಕರ್ ಸೇರಿದಂತೆ ಇತರೆ ಶಾಸಕರು, ನಾಯಕರು ಪಕ್ಷದ ಆದೇಶ ಪಾಲಿಸಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಾಮಾನ್ಯ ಕಾರ್ಯಕರ್ತ, ಮಾಜಿ ಮೇಯರ್ ಪುತ್ರ ಯುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಿದ್ದು, ಎಲ್ಲರೂ ಒಟ್ಟಾಗಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು” ಎಂದರು.
ಕೋಲಾರದಲ್ಲಿ ಗೆಲ್ಲುವ ಅವಕಾಶವಿದ್ದರೂ ಒಳಏಟು ಬೀಳುವ ಸಾಧ್ಯತೆ ಬಗ್ಗೆ ಕೇಳಿದಾಗ, “ಯಾವ ಒಳಏಟೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪರಿಶಿಷ್ಟ ಜಾತಿ ಬಲಪಂಥಿಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದರು. ಅದನ್ನು ತಪ್ಪು ಎಂದು ಹೇಳುವುದಿಲ್ಲ. 10 ಕ್ಷೇತ್ರಗಳಲ್ಲಿ ಎಡಪಂಥಿಯರು ಹೆಚ್ಚಾಗಿದ್ದು, ನಾವು ರಾಜ್ಯದ ಹಿತ ನೋಡಬೇಕಿದೆ. ಎಲ್ಲವನ್ನು ಲೆಕ್ಕಾಚಾರ ಮಾಡಿ ಟಿಕೆಟ್ ನೀಡಿದ್ದೇವೆ” ಎಂದರು.
BREAKING: ‘ರಾಜ್ಯ ಸರ್ಕಾರ’ದಿಂದ ‘ಲೋಕಸಭಾ ಚುನಾವಣೆ’ಯಂದು ‘ಸಾರ್ವತ್ರಿಕ ರಜೆ’ ಘೋಷಿಸಿ ಆದೇಶ
BREAKING : ಡಿಸಿಎಂ ಡಿಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ : ‘IT’ ಇಲಾಖೆಯಿಂದ ನೋಟಿಸ್ ಜಾರಿ