ನವದೆಹಲಿ/ಜೆರುಸಲೇಂ: ಇಸ್ರೇಲ್ ಸರ್ಕಾರವು ಈಶಾನ್ಯ ಭಾರತದ ಮಣಿಪುರ ಮತ್ತು ಮಿಜೋರಾಂನಲ್ಲಿ ವಾಸಿಸುತ್ತಿರುವ ‘ಬನೇ ಮೆನಾಶೆ’ (Bnei Menashe) ಸಮುದಾಯದ ಜನರನ್ನು ತನ್ನ ದೇಶಕ್ಕೆ ಸ್ಥಳಾಂತರಿಸಲು ‘ಆಪರೇಷನ್ ವಿಂಗ್ಸ್ ಆಫ್ ಡಾನ್’ (Operation Wings Of Dawn – ಹೀಬ್ರೂ ಭಾಷೆಯಲ್ಲಿ ‘ಕಾನ್ಫೆ ಶಹರ್’) ಎಂಬ ಬೃಹತ್ ಅಭಿಯಾನವನ್ನು ಕೈಗೆತ್ತಿಕೊಂಡಿದೆ.
ಸುಮಾರು 2,700 ವರ್ಷಗಳ ಹಿಂದೆ ನಾಪತ್ತೆಯಾದ ಇಸ್ರೇಲ್‌ನ ‘ಹತ್ತು ಬುಡಕಟ್ಟುಗಳ’ (Lost Tribes) ವಂಶಸ್ಥರು ಈ ಬನೇ ಮೆನಾಶೆ ಜನರು ಎಂಬುದು ಇಸ್ರೇಲ್‌ನ ನಂಬಿಕೆ. ಈಗ ಈ ಸಮುದಾಯದ ಅಂತಿಮ ಹಂತದ ವಲಸೆ ಅಥವಾ ‘ಅಲಿಯಾ’ ಪ್ರಕ್ರಿಯೆಗೆ ಇಸ್ರೇಲ್ ಚಾಲನೆ ನೀಡಿದೆ.
ಅಭಿಯಾನದ ಮೂಲಕ ಮಣಿಪುರ ಮತ್ತು ಮಿಜೋರಾಂನಲ್ಲಿರುವ ಸುಮಾರು 5,800 ಜನರನ್ನು 2030ರ ವೇಳೆಗೆ ಇಸ್ರೇಲ್‌ಗೆ ಕರೆದೊಯ್ಯಲಾಗುವುದು. ಇದರಲ್ಲಿ ಮೊದಲ ಹಂತವಾಗಿ 1,200 ಜನರನ್ನು 2026ರಲ್ಲೇ ಕರೆದೊಯ್ಯಲು ಯೋಜನೆ ರೂಪಿಸಲಾಗಿದೆ.
ಈ ಪುನರ್ವಸತಿ ಯೋಜನೆಗಾಗಿ ಇಸ್ರೇಲ್ ಸರ್ಕಾರ ಸುಮಾರು 90 ಮಿಲಿಯನ್ ಶೇಕೆಲ್ (ಸುಮಾರು 225 ಕೋಟಿ ರೂ.) ಹಣವನ್ನು ಮೀಸಲಿಟ್ಟಿದೆ. ಇದರಲ್ಲಿ ವಿಮಾನ ಪ್ರಯಾಣದ ವೆಚ್ಚ, ವಸತಿ, ಹೀಬ್ರೂ ಭಾಷಾ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶನ ಸೇರಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಮುದಾಯದ ಅನೇಕ ಕುಟುಂಬಗಳು ಸಂಕಷ್ಟದಲ್ಲಿದ್ದು, ಅವರ ರಕ್ಷಣೆ ಮತ್ತು ಧಾರ್ಮಿಕ ಭಾವನೆಯನ್ನು ಗೌರವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮರಳುವ ಜನರನ್ನು ಪ್ರಮುಖವಾಗಿ ಉತ್ತರ ಇಸ್ರೇಲ್‌ನ ‘ನೋಫ್ ಹಾ-ಗಲಿಲ್’ ಮತ್ತು ಗಲಿಲೀ ಪ್ರದೇಶದ ಇತರ ನಗರಗಳಲ್ಲಿ ನೆಲೆಸಲು ವ್ಯವಸ್ಥೆ ಮಾಡಲಾಗುತ್ತಿದೆ.








