ಶಿವಮೊಗ್ಗ: ಕಳೆದ ಎಂಟು ದಿನಗಳಿಂದ ಬೆಳಗ್ಗೆ ಕಾಡು ಸೇರಿ, ರಾತ್ರಿಯಾದ್ರೆ ಸಾಕು ಹೊರಬಂದು ರೈತರ ಬೆಳೆಗಳನ್ನು ಜೋಡಿ ಕಾಡಾನೆಗಳು ಉಳವಿ, ಕೈಸೋಡಿ, ಬರಗಿ, ಮಡಸೂರು, ಹೊಳೆಕೊಪ್ಪ, ಕ್ಯಾಸನೂರು ಭಾಗದಲ್ಲಿ ನಾಶ ಮಾಡಿವೆ. ಜೋಡಿ ಕಾಡಾನೆಗಳನ್ನು ಓಡಿಸೋದಕ್ಕೆ ಆನೆ ಕಾರ್ಯಪಡೆ, ಅರಣ್ಯ ಇಲಾಖೆಯ ಇಡೀ ತಂಡವೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ನಾಳೆ ಕುಮ್ಕಿ ಆನೆಗಳನ್ನು ಬಳಸಿ ಬಂದ ಕಡೆಗೆ ಕಾಡಾನೆ ಓಡಿಸೋ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಇಳಿಯಲಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬರಗಿ ಅರಣ್ಯ ವ್ಯಾಪ್ತಿಯಲ್ಲಿ ಜೋಡಿ ಕಾಡಾನೆಗಳು ಬೀಡು ಬಿಟ್ಟು, ಅಲ್ಲಲ್ಲಿ ರೈತರ ಬೆಳೆಗಳನ್ನು ನಾಶ ಮಾಡಿವೆ. ಮಡಸೂರು ಕಾಡಿನಲ್ಲಿ ಥರ್ಮಲ್ ಸ್ಕ್ಯಾನ್ ಡ್ರೋನ್ ಮೂಲಕ ಜೋಡಿ ಆನೆಗಳನ್ನು ಪತ್ತೆ ಹಚ್ಚಲಾಗಿತ್ತು. ಆ ಬಳಿಕ ನಿರಂತರವಾಗಿ ಅರಣ್ಯ ಗಸ್ತು ಪಾಲಕ, ಡ್ರೋನ್ ಆಪರೇಟರ್ ಗೋಪಿ ಕಾಡಾನೆಯನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಾ ಕಾಡಾನೆ ಓಡಿಸೋ ಕಾರ್ಯಾಚರಣೆಗೆ ಸಾಥ್ ಕೊಟ್ಟಿದ್ದಾರೆ.

ಸಕ್ರೆಬೈಲಿನಿಂದ ನಾಲ್ಕು ಕುಮ್ಕಿ ಆನೆಗಳು ಬರಗಿಗೆ ಆಗಮನ
ಇಂದು ಕಾಡಾನೆ ಓಡಿಸೋದಕ್ಕಾಗಿ ಕುಮ್ಕಿ ಆನೆಗಳನ್ನು ಬಳಸಲು ಅರಣ್ಯ ಇಲಾಖೆ ನಿರ್ಧರಿಸಿದಂತೆ ಸಕ್ರೈಬೈಲಿನಿಂದ ಅರ್ಜುನ, ಭೀಷ್ಮ, ಸೋಮ ಹಾಗೂ ಅಶ್ವತ್ಥಾಮ ಕುಮ್ಕಿ ಆನೆಗಳು ಬರಗಿಗೆ ಕರೆತರಲಾಗಿದೆ.
ಭೀಷ್ಮ ಮಡಸೂರು ಮಾಣಿಕ್ಯ ಎಂದೇ ಪ್ರಸಿದ್ಧಿಯಾಗಿದ್ದಂತ ಆನೆಯಾಗಿದೆ. ನಾಲ್ಕು ತಿಂಗಳ ಹಿಂದಷ್ಟೇ ಕಾಡಾನೆಯಾಗಿದ್ದ ಇದನ್ನು ಸೆರೆ ಹಿಡಿಯಲಾಗಿತ್ತು. ಸಕ್ರೈಬೈಲಿನಲ್ಲಿ ಮಾವುತರು ಇದನ್ನು ಪಳಗಿಸಿದ್ದು, ಕುಮ್ಕಿ ಆನೆಯಾಗಿ ತಯಾರು ಮಾಡಲಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಬರಗಿಯಲ್ಲಿ ಕಾಡಾನೆ ಓಡಿಸೋ ಕಾರ್ಯಾಚರಣೆಗೂ ಇಳಿಸಲಾಗಿದೆ.

ಕುಮ್ಕಿ ಆನೆಗಳಿಂದ ಕಾಡಾನೆ ಓಡಿಸೋ ಪರೇಡ್ ನಡೆಸಿದ ಡಿಎಫ್ಓ ಮೋಹನ್ ಕುಮಾರ್
ಸಕ್ರೈಬೈಲಿನಿಂದ ಬರಗಿಗೆ ಬಂದಂತ ಕುಮ್ಕಿ ಆನೆಗಳನ್ನು, ಬರಗಿಗೆ ಆಗಮಿಸುತ್ತಿದ್ದಂತೆ ಸಂಜೆಯ ವೇಳೆಯಲ್ಲೂ ಕಾಡಿನ ಒಂದಷ್ಟು ದೂರ ಸಾಗಿಸಿ, ಕಾಡಾನೆಗಳಿಗೆ ಬೇರೆ ಆನೆಗಳು ಬಂದಿರುವಂತ ಸುಳಿವು ನೀಡುವಂತ ಕೆಲಸವನ್ನು ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಮಾಡಿದರು. ಬರಗಿ ಕಾಡಿನ ಒಂದಷ್ಟು ಒಳಗೆ ನಾಲ್ಕು ಕುಮ್ಕಿ ಆನೆಗಳನ್ನು ಪರೇಡ್ ಮಾಡಿಸಿದಂತ ಡಿಎಫ್ಓ ಅವುಗಳಿಂದ ಕೂಗು ಹಾಕಿಸಿ, ಕಾಡಾನೆ ಓಡಿಸೋ ತಾಲೀಮನ್ನು ನಡೆಸಿದರು.
ಕಾಡಾನೆ ಓಡಿಸೋ ಕಾರ್ಯಾಚರಣೆ ಸ್ಥಳಕ್ಕೆ ಸಿಸಿಎಫ್ ಹನುಮಂತಪ್ಪ ಭೇಟಿ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬರಗಿಗೆ ಕಾಡಾನೆ ಓಡಿಸೋ ಕಾರ್ಯಾಚರಣೆ ಸ್ಥಳಕ್ಕೆ ಶಿವಮೊಗ್ಗ ಸಿಸಿಎಫ್ ಹನುಮಂತಪ್ಪ ಭೇಟಿ ನೀಡಿದರು. ಸ್ಥಳದಲ್ಲಿದ್ದ ಡಿಎಫ್ಓ ಮೋಹನ್ ಕುಮಾರ್ ಅವರಿಂದ ಕಾಡಾನೆ ಓಡಿಸೋ ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನು ಪಡೆದರು. ಸಿಸಿಎಫ್ ಹನುಮಂತಪ್ಪಗೆ ಕಾಡಾನೆ ಓಡಿಸೋ ಮಾರ್ಗದ ಬಗ್ಗೆ ಉಳವಿ ಡಿ ಆರ್ ಎಫ್ ಓ ಯೋಗರಾಜ್ ಇಂಚಿಂಚು ಮಾಹಿತಿ ನೀಡಿದರು.

ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕುಮ್ಕಿ ಆನೆಗಳನ್ನು ಬಳಸಿ ಜೋಡಿ ಕಾಡಾನೆಯನ್ನು ಓಡಿಸೋ ಕಾರ್ಯಾಚರಣೆಯನ್ನು ನಾಳೆ ನಡೆಸಲಾಗುತ್ತದೆ. ಈಗಾಗಲೇ ಥರ್ಮಲ್ ಡ್ರೋನ್ ಬಳಸಿ ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕಾಡಾನೆಗಳು ಬಂದ ಮಾರ್ಗದಲ್ಲೇ ಮರಳಿ ಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಗೆ ಓಡಿಸುವ ಕೆಲಸವನ್ನು ಅರಣ್ಯ ಇಲಾಖೆಯಿಂದ ಮಾಡುವುದಾಗಿ ತಿಳಿಸಿದರು.

ಬೆಳೆನಾಶಗೊಂಡ ರೈತರಿಗೆ ಪರಿಹಾರದ ಭರವಸೆ
ಕಾಡಾನೆ ದಾಳಿಯಿಂದಾಗಿ ಸೊರಬ ತಾಲ್ಲೂಕಿನ ಉಳವಿ, ಕೈಸೋಡಿ, ಮೈಸಾವಿ, ಮಡಸೂರು ಸೇರಿದಂತೆ ಕೆಲ ಪ್ರದೇಶಗಳಲ್ಲಿ ರೈತರ ಬೆಳೆನಾಶಗೊಂಡಿರುವ ಮಾಹಿತಿ ತಿಳಿದು ಬಂದಿದೆ. ಅಂತಹ ರೈತರು ಅರಣ್ಯ ಇಲಾಖೆಗೆ ಅರ್ಜಿಯನ್ನು ನೀಡುವಂತೆ ಮನವಿ ಮಾಡಿದರು. ರೈತರು ಬೆಳೆಹಾನಿಗೆ ಸಂಬಂಧಿಸಿದಂತೆ ನೀಡುವಂತ ಅರ್ಜಿಯನ್ನು ಪರಿಶೀಲಿಸಿ, ಬೆಳೆ ನಾಶದ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿಯನ್ನು ನೀಡಿ, ಶೀಘ್ರವೇ ಪರಿಹಾರ ಕಲ್ಪಿಸಿಕೊಡುವಂತ ಕೆಲಸ ಮಾಡುವುದಾಗಿ ಭರವಸೆಯನ್ನು ಶಿವಮೊಗ್ಗ ಸಿಸಿಎಫ್ ಹನುಮಂತಪ್ಪ ನೀಡಿದರು.
ಆನೆ ಕಾರ್ಯಪಡೆಯ ಡಿಆರ್ ಎಫ್ ಓ ಸುನೀಲ್ ಕಾರ್ಯವನ್ನು ಶ್ಲಾಘಿಸಿದ ಸಿಸಿಎಫ್
ಐದು ದಿನ ಪತ್ತೆ ಹಚ್ಚಿದರೂ ಸಾಗರ-ಸೊರಬ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಣ್ಣಿಗೆ ಕಾಡಾನೆಗಳು ಬಿದ್ದಿರಲಿಲ್ಲ. ಹೀಗಾಗಿ ಚಿಕ್ಕಮಗಳೂರಿನ ಎನ್ ಆರ್ ಪುರದಲ್ಲಿದ್ದಂತ ಆನೆ ಕಾರ್ಯಪಡೆ ( Elephant Task Forse-ETF) ತಂಡವನ್ನು ಆರನೇ ದಿನದ ವೇಳೆಯಲ್ಲಿ ಕರೆತರುವಂತ ಕೆಲಸವನ್ನು ಡಿಎಫ್ಓ ಮೋಹನ್ ಕುಮಾರ್ ಮಾಡಿದ್ದರು. ಇಟಿಎಫ್ ಸುನೀಲ್ ನೇತೃತ್ವದ ಆರು ಜನರ ತಂಡ ಆಗಮಿಸುತ್ತಿದ್ದಂತೆ ಮಡಸೂರಿನ ಕಾಡಿನೊಳಗೆ ನುಗ್ಗಿ, ಕಾಡಾನೆಯ ಜಾಡು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಆ ವೇಳೆಗಾಗಲೇ ಆಗಮಿಸಿದ್ದಂತ ಥರ್ಮಲ್ ಸ್ಕ್ಯಾನ್ ಡ್ರೋನ್ ಆಪರೇಟರ್ ಗೋಪಿ ಅವರಿಗೆ ಕಾಡಾನೆ ಇರುವಂತ ಖಚಿತ ಸ್ಥಳದ ಮಾಹಿತಿ ನೀಡಿದ್ದರು.

ಅರಣ್ಯ ಗಸ್ತು ಪಾಲಕ ಹಾಗೂ ಡ್ರೋನ್ ಆಪರೇಟರ್ ಗೋಪಿ, ಇಟಿಎಫ್ ಸುನೀಲ್ ಅಂಡ್ ಟೀಂ ನೀಡಿದಂತ ಸ್ಥಳದಲ್ಲಿ ಥರ್ಮಲ್ ಡ್ರೋನ್ ಹಾರಿಸಿ ನೋಡಿದಾಗ ಜೋಡಿ ಆನೆಗಳು ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದವು. ಅಲ್ಲಿಂದ ನಿರಂತರವಾಗಿ ಕಾಡಾನೆ ಓಡಿಸೋ ಕಾರ್ಯಾಚರಣೆಗೆ ಇಟಿಎಫ್ ಟೀಂ ಸಾಥ್ ನೀಡಿತ್ತು. ಹಗಲಿರುಳು ಎನ್ನದೇ ಕೆಲಸ ಮಾಡಿದಂತ ಇಟಿಎಫ್ ಟೀಂ ಕೆಲಸವನ್ನು ಡಿಎಫ್ಓ ಮೋಹನ್ ಕುಮಾರ್ ಅವರು ಬರಗಿಗೆ ಆಗಮಿಸಿದಂತ ಸಿಸಿಎಫ್ ಹನುಮಂತಪ್ಪ ಅವರ ಗಮನಕ್ಕೆ ತಂದರು. ಆಗ ಆನೆ ಕಾರ್ಯಪಡೆಯ ಸುನೀಲ್ ಅಂಡ್ ಟೀಂ ಕರೆದು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, ಶ್ಲಾಘಿಸಿದರು.
ಕಾಡಾನೆ ಓಡಿಸೋದಕ್ಕೆ ಹಗಲಿರುಳು ಶ್ರಮಿಸುತ್ತಿರುವ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು
ಉಳವಿ, ಕೈಸೋಡಿ, ಮೈಸಾವಿ, ದೂಗೂರು, ಮಡಸೂರು, ಬರಗಿಯಲ್ಲಿ ದಾಂಧಲೆ ನಡೆಸಿದ ಕಾಡಾನೆ ಓಡಿಸೋದಕ್ಕೆ ಕಳೆದ 8 ದಿನಗಳಿಂದ ಹಗಲು ಇರುಳು ಎನ್ನದೇ ಎಸಿಎಫ್, ಆರ್ ಎಫ್ ಓ, ಡಿ ಆರ್ ಎಫ್ ಓ, ಅರಣ್ಯ ಗಸ್ತು ಪಾಲಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬೆಳಗ್ಗೆ 8 ರಿಂದ 9 ಗಂಟೆಗೆ ಕಾಡಾನೆ ಪತ್ತೆ, ಓಡಿಸೋ ಕಾರ್ಯಾಚರಣೆಗೆ ಇಳಿದರೇ ರಾತ್ರಿ 10ರವರೆಗೆ ಆ ಕೆಲಸದಲ್ಲೇ ನಿರತರಾಗಿದ್ದು ಕಂಡು ಬಂದಿತ್ತು.
ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ, ಸಾಗರ ಎಸಿಎಫ್ ರವಿ, ಆರ್ ಎಫ್ ಓ ಶ್ರೀಪಾದ್ ನಾಯ್ಕ್, ಸಾಗರ ಆರ್ ಎಫ್ ಓ ಅಣ್ಣಪ್ಪ, ಉಳವಿ ಡಿ ಆರ್ ಎಫ್ ಓ ಯೋಗರಾಜ್, ನಿಸ್ಸರಾಣಿಯ ಮುತ್ತಣ್ಣ, ನೆಲ್ಲೂರು ಡಿ ಆರ್ ಎಫ್ ಓ ರಾಮಪ್ಪ, ಕೆಳದಿ ಡಿ ಆರ್ ಎಫ್ ಓ ವಿಜಯ್ ಕುಮಾರ್, ಸಿರಿವಂತೆಯ ಡಿ ಆರ್ ಎಫ್ ಓ ನರೇಂದ್ರ ಕುಮಾರ್.ಟಿ.ಪಿ, ಗಸ್ತು ಅರಣ್ಯ ಪಾಲಕರಾದ ಪ್ರವೀಣ್ ಕುಮಾರ್, ಸುಮಿತ, ವಾಚರ್ಸ್ ಆದಂತ ಶ್ರೀಕಾಂತ್, ಶಶಿ, ಲೋಕೇಶ್ ಸೇರಿದಂತೆ ಇತರೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಹಗಲು ಇರುಳು ಎನ್ನದೆ ಶ್ರಮಿಸುತ್ತಿದ್ದಾರೆ.

ನಾಳೆ ಸೊರಬ ಗಡಿ ದಾಡಿಸೋ ಸಾಧ್ಯತೆ
ಜೋಡಿ ಕಾಡಾನೆಗಳನ್ನು ನಾಳೆ ಡ್ರೋನ್ ಬಳಸಿ ಪತ್ತೆ ಹಚ್ಚಿ, ಕುಮ್ಕಿ ಆನೆಗಳ ಮೂಲಕ ಸೊರಬ ಗಡಿಯನ್ನು ದಾಡಿಸಿ ಅವುಗಳು ಬಂದ ಪ್ರದೇಶದತ್ತ ಓಡಿಸೋ ಕಾರ್ಯಾಚರಣೆ ಮುಂದುವರೆಯಲಿದೆ. ಕುಮ್ಕಿ ಆನೆಗಳ ಜೊತೆಗೆ ಸಿಡಿಮದ್ದು, ತಮಟೆ, ಏರ್ ಗನ್ ಬಳಸಿ, ಕಾಡಾನೆಗಳನ್ನು ನಾಳೆ ಅರಣ್ಯ ಇಲಾಖೆಯಿಂದ ಓಡಿಸೋ ಸಾಧ್ಯತೆ ಇದೆ. ಕಾಡಾನೆಗಳು ನಾಳೆ ಇರುವ ಜಾಗ ಪತ್ತೆಯಾದರೇ ಓಡಿಸೋ ಕಾರ್ಯಾಚರಣೆ ತ್ವರಿತವಾಗಿ, ಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಗೆ ಓಡಿಸೋದಕ್ಕೆ ಸಾಧ್ಯವಾಗಲಿದೆ.
ಕಾಡಾನೆ ಓಡಿಸುವುದಕ್ಕಿಂತ ಸೆರೆ ಹಿಡಿದು, ಬಂದೆಡೆ ಬಿಟ್ಟು ಬರುವಂತೆ ಓತ್ತಾಯ
ಬರಗಿಯಲ್ಲಿ ಇರುವಂತ ಕಾಡಾನೆಗಳನ್ನು ಕುಮ್ಕಿ ಆನೆಗಳನ್ನು ಬಳಸಿ ಭದ್ರ ಅರಣ್ಯ ವ್ಯಾಪ್ತಿಯ ಶೆಟ್ಟಿಹಳ್ಳಿಗೆ ಓಡಿಸೋದಕ್ಕೆ ಏನಿಲ್ಲವೆಂದರೂ ಮೂರು ನಾಲ್ಕು ದಿನಗಳೇ ಬೇಕಾಗಬಹುದು. ಜೊತೆಗೆ ಕಾಡಾನೆಗಳು ಸಾಗುವ ಮಾರ್ಗಮಧ್ಯದಲ್ಲಿನ ರೈತರ ಬೆಳೆಗಳು ನಾಶವಾಗೋದು ಗ್ಯಾರಂಟಿ. ಹೀಗಾಗಿ ಕಾಡಾನೆ ಓಡಿಸೋ ಕಾರ್ಯಾಚರಣೆಯನ್ನು ಬಿಟ್ಟು, ಸೆರೆ ಹಿಡಿದು ಕೊಂಡೊಯ್ಯುವುದು ಉತ್ತಮ ಕಾರ್ಯವಾಗಿದೆ. ಆ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಈ ಬಗ್ಗೆ ಕನ್ನಡ ನ್ಯೂಸ್ ನೌ ಸಿಸಿಎಫ್ ಹನುಮಂತಪ್ಪ ಅವರನ್ನು ಕೇಳಿದಾಗ ಮೊದಲು ಕುಮ್ಕಿ ಆನೆಗಳನ್ನು ಬಳಸಿ ಓಡಿಸೋ ಕಾರ್ಯಾಚರಣೆ ಮಾಡಲಾಗುತ್ತದೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೇ ಸರ್ಕಾರದಿಂದ ಕಾಡಾನೆ ಸೆರೆ ಹಿಡಿದು ಶೆಟ್ಟಿಹಳ್ಳಿ ವ್ಯಾಪ್ತಿಯ ಕಾಡಿಗೆ ಬಿಡೋದಕ್ಕೆ ಪ್ರಯತ್ನಿಸಲಾಗುತ್ತದೆ. ಆ ನಿಟ್ಟಿನಲ್ಲಿಯೂ ಕ್ರಮ ವಹಿಸಲು ಅರಣ್ಯ ಇಲಾಖೆ ಮುಂದಾಗಲಿದೆ ಎಂದು ತಿಳಿಸಿದ್ದಾರೆ.
ಇಂದಿನ ಕಾಡಾನೆ ಓಡಿಸೋ ಕಾರ್ಯಾಚರಣೆಯಲ್ಲಿ ಸಾಗರ, ಸೊರಬ, ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ, ನಗರ, ಹೊಸನಗರ, ಅಂಬಲಗೋಡು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದಂತ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ನಾಳೆ ರೈತರ ಬೃಹತ್ ಪ್ರತಿಭಟನೆ, ಸುವರ್ಣ ಸೌಧಕ್ಕೆ ಮುತ್ತಿಗೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ALERT : ನಿಮ್ಮ `ಮನೆಯಲ್ಲಿ `ಇನ್ವರ್ಟರ್’ ಬಳಸುತ್ತೀರಾ? ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.!








