ಮಂಡ್ಯ :- ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ವತೋಮುಖ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಅನ್ಯಪಕ್ಷದ ಮುಖಂಡರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು, ಬೂದಗುಪ್ಪೆ, ಚುಂಚಗಳ್ಳಿ, ಆಲೂರು ದೊಡ್ಡಿ, ನೀಲಕಂಠನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಯುವ ಮುಖಂಡರು ಆಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಉದಯ್ ಶಂಕರ್ ಅವರ ನೇತೃತ್ವದಲ್ಲಿ ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಭಾನುವಾರ ಮಾತನಾಡಿದರು.
ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯುವ ಪಡೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಅಭಿವೃದ್ಧಿ ಮಾಡಲು ಮತ್ತಷ್ಟು ಉತ್ಸಾಹ ನೀಡಿದೆ. ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮತ ಕೊಟ್ಟು ನನಗೆ ಆಶೀರ್ವಾದ ಮಾಡಿದ್ದಿರಿ. ನಿಮ್ಮ ನಂಬಿಕೆಗೆ ನಾನು ದ್ರೋಹ ಮಾಡಲ್ಲ. ನಿರೀಕ್ಷೆಗೂ ಮೀರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಗ್ರಾಮಗಳಲ್ಲಿ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ನೀವು ನನಗೆ ಆಶೀರ್ವಾದ ಮಾಡಿರೋದು ಗ್ರಾಮಗಳ ಅಭಿವೃದ್ಧಿ ಮಾಡುವುದಕ್ಕೆ ಅದು ಬಿಟ್ಟು ರಾಜಕೀಯ ಬೆರೆಸಿ ಗುಂಪುಗಾರಿಕೆ ಮಾಡುವ ವ್ಯಕ್ತಿ ನಾನಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಉದಯ್ ಶಂಕರ್ ಮಾತನಾಡಿ, ಆಲೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಆಮೀಷಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಯುವ ಮುಖಂಡ ಮಧುಸೂದನ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಕೇವಲ ಎರಡುವರೇ ವರ್ಷಗಳಲ್ಲಿ 1800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರ ದೂರದೃಷ್ಟಿ, ಅಭಿವೃದ್ಧಿಗಾಗಿ ಅವರ ಕೈ ಬಲ ಪಡಿಸಲು ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಲೂರು ಗ್ರಾಮದ ಶಿವಣ್ಣ, ನಟರಾಜು, ವಿವೇಕ್, ಶಿವಲಿಂಗಣ್ಣ, ಜಗ್ಗಿ, ಉಮೇಶ್, ಅರಕೇಶ್, ಬೀರೇಶ್, ಚುಂಚಗಳ್ಳಿ ಗ್ರಾಮದ ಮಧು, ಶಿವಣ್ಣ, ಬೂದುಗುಪ್ಪೆ ಗ್ರಾಮದ ನಂದೀಶ್, ಮಹದೇವು, ವಿಜಿ, ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಜೆಡಿಎಸ್, ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ನಗರಕೆರೆ ಸಂದೀಪ್ ಮುಖಂಡರಾದ ಉಮೇಶ್, ಕುಮಾರ್ ಇತರರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








