ಮಂಡ್ಯ : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಮದ್ದೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ತಾಲೂಕು ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಶಂಕರೇಗೌಡ ಮಾತನಾಡಿ, 2022-23 ನೇ ಸಾಲಿನಲ್ಲಿ ಕಬ್ಬು ಅರೆದಿರುವ ಹಂಗಾಮಿನಲ್ಲಿ ಅಂದಿನ ರಾಜ್ಯ ಸರ್ಕಾರ ಟನ್ ಕಬ್ಬಿಗೆ 150 ರೂ.ಗಳನ್ನು ಕಬ್ಬು ಬೆಳೆಗಳಿಗೆ ಪಾವತಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಆದರೆ, ಇಲ್ಲಿಯವರೆಗೂ ಬಿಡುಗಡೆ ಮಾಡಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನೊಂದು ತಿಂಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತಿದ್ದು, ಭತ್ತಕ್ಕೆ ಕ್ವಿಂಟಾಲ್ಗೆ ಕನಿಷ್ಟ 3500 ರೂ. ಬೆಲೆ ನಿಗದಿಗೊಳಿಸಬೇಕು ಹಾಗೂ ನವಂಬರ್ ತಿಂಗಳಲ್ಲೇ ಖರೀದಿ ಕೇಂದ್ರ ತೆರೆದು ರಾಗಿ, ಭತ್ತ ಖರೀಸಬೇಕು ಮತ್ತು ಶಾಶ್ವತವಾಗಿ ಖರೀದಿ ಕೇಂದ್ರಗಳನ್ನು ವರ್ಷ ಪೂರ್ತಿ ತೆರೆಯಬೇಕು. ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗಧಿಪಡಿಸಬೇಕೆಂದರು.
ಕೇಂದ್ರ ಸರ್ಕಾರ ಕಬ್ಬಿಗೆ ಎಫ್ ಆರ್ ಪಿ ಬೆಲೆ ನಿಗಧಿ ಮಾಡುವಾಗ 8.5 ಇಳುವರಿ ಮಾನದಂಡ ಅನುಸರಿಸಿ ಬೆಲೆ ನಿಗಧಿಪಡಿಸುವಂತೆ ಕೇಂದ್ರ ಸರ್ಕಾರ ಗಮನ ಹರಿಸಬೇಕು.
ಬ್ಯಾಂಕ್ ಗಳಲ್ಲಿ ರೈತರು ಅಡಮಾನವಿಟ್ಟ ಚಿನ್ನಾಭರಣಗಳನ್ನು ನವೀಕರಿಸಲು ಅಸಲು ಮತ್ತು ಬಡ್ಡಿ ಪಾವತಿಸುವಂತೆ ರೂಪಿಸಿರುವ ನೀತಿಯನ್ನು ಕೈ ಬಿಟ್ಟು ಹಿಂದಿನಂತೆ ಬಡ್ಡಿ ಪಡೆದು ಸಾಲ ನವೀಕರಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸರ್ಕಾರ ನಿರ್ದೆಶನ ನೀಡಬೇಕೆಂದು ಒತ್ತಾಹಿಸಿದರು.
ರಾಜ್ಯ ಸರ್ಕಾರ ಕೈಗೊಂಡಿರುವ ಬೆಂಗಳೂರು ಕುಡಿಯುವ ನೀರಿನ 6 ನೇ ಹಂತದ ಯೋಜನೆ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದ
ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಸಲ್ಲಿಸಿದರು.
ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ತಾಪಂ ಇಒ ರಾಮಲಿಂಗಯ್ಯ ಆಗಮಿಸಿ ಪ್ರತಿಭಟನಕಾರಿಂದ ಮನವಿ ಸ್ವೀಕರಿಸಿ ಮಾತನಾಡಿ, ಶೀಘ್ರವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಪ್ರತ್ಯೇಕವಾಗಿ ರೈತರ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ವಿ.ಸಿ.ಉಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಲ್.ವಿನೋದ್ ಕುಮಾರ್, ಖಜಾಂಚಿ ಅಣ್ಣೂರು ಬೋರೇಗೌಡ, ಮುಖಂಡರಾದ ಲಿಂಗಪ್ಪಾಜಿ, ಜಿ.ಎ.ಶಂಕರ್, ಗೊಲ್ಲರದೊಡ್ಡಿ ಅಶೋಕ್, ಜಿ.ಎಚ್.ವೀರಪ್ಪ, ರವಿಕುಮಾರ್, ದೇವರಾಜು, ರಾಜೇಶ್, ಮಹೇಶ, ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ