ಮಂಡ್ಯ : ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ಸಂಘಗಳಿಂದ ಮಾತ್ರ ಸಾಧ್ಯವಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ತೈಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಮದ್ದೂರು ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ಆಯೋಜಿಸಿದ್ದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಸಂಘಗಳ ಪಾತ್ರ ಅಪಾರವಾಗಿದ್ದು, ರೈತರ ಜೀವನಾಡಿಯಾಗುತ್ತಿವೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳಿಂದ ಅಸಾಧ್ಯವಾಗಿದ್ದು, ಸಹಕಾರ ಸಂಘಗಳಿಂದ ಮಾತ್ರ ಸಾಧ್ಯವಾಗಲಿದೆ. ರೈತರಿಗೆ ಕಾಲ ಕಾಲಕ್ಕೆ ಸಾಲ ಸೌಲಭ್ಯ ನೀಡಿ ರೈತರ ಬೆನ್ನೆಲುಬಾಗಿ ನಿಂತಿರುವುದರಿಂದ ರೈತರ ಬದುಕು ಕೂಡ ಹಸನಾಗುತ್ತಿದೆ. ಸಹಕಾರ ಸಂಸ್ಥೆಗಳು ಇನ್ನಷ್ಟು ಅಭಿವೃದ್ಧಿಯಾಗಬೇಕು ಇದರಿಂದ ರೈತರ ಬದುಕು ಸುಧಾರಣೆಗೊಳ್ಳಲಿದ್ದು, ತಾಲೂಕಿನ ಸಹಕಾರ ಸಂಘಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಕಾರ ಕ್ಷೇತ್ರದ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಧೃಡಗೊಳ್ಳುವ ಮೂಲಕ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದ್ದಾರೆ. ಹೀಗಾಗಿ ಮಹಿಳೆಯರಿಂದಲೂ ಸಹ ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇತ್ತಿಚಿನ ದಿನಗಳಲ್ಲಿ ತಾಲೂಕಿನ ಕೆಲವು ಸಹಕಾರ ಸಂಘಗಳಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿದ್ದು, ಇಂತಹುಗಳಿಂದ ನೈಜತೆ ಹೊಂದಿರುವ ಸಂಘಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಸಂಘದ ಹಣಕಾಸು ವ್ಯವಹಾರಗಳಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಂತೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಎಚ್ಚರಿಕೆ ವಹಿಸುವಂತೆ ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ಸಿಇಓ ವನಜಾಕ್ಷಿ ಮಾತನಾಡಿ, ಗ್ರಾಮೀಣ ಭಾಗದ ಜನರ, ಮಹಿಳೆಯರ ಸ್ವಾವಲಂಬನೆಗೆ ಜಿಲ್ಲಾದ್ಯಂತ ಇರುವ ಸಹಕಾರ ಸಂಘಗಳು ಸಾಕಷ್ಟು ಅನುದಾನ ನೀಡುತ್ತಿದ್ದು, ಜಿಲ್ಲೆಯಲ್ಲಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.
ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟಕ್ಕೆ ಪ್ರತಿ ನಿತ್ಯ 12 ಲಕ್ಷ ಲೀಟರ್ ಹಾಲು ಬರುತ್ತಿದ್ದು, 5 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ಉಳಿದ 7 ಲಕ್ಷ ಲೀಟರ್ ಹಾಲಿಗೂ ಸಹ ಸರ್ಕಾರದ ನಿರ್ದೇಶನದಂತೆ ರೈತರಿಗೆ 4 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ವಾರ್ಷಿಕ 90 ಕೋಟಿ ರೂ ಒಕ್ಕೂಟಕ್ಕೆ ಹೊರೆಯಾಗುತ್ತಿದೆ ಎಂದರು.
ರಾಜ್ಯದಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿದ್ದು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಕಾರ್ಯ ಚಟುವಟಿಕೆಗಳಲ್ಲಿ ಪ್ರತಿ ಬಾರಿಯೂ ಮೊದಲು, ಅಥವಾ ಎರಡನೇ ಸ್ಥಾನಗಳನ್ನು ಪಡೆದುಕೊಳ್ಳುತ್ತಿದೆ. ಗುಣಮಟ್ಟ ಹಾಗೂ ಮಾರುಕಟ್ಟೆ ವ್ಯವಹಾರಗಳಲ್ಲಿಯೂ ಸಹ ಮೊದಲನೇ ಸ್ಥಾನದಲ್ಲಿದ್ದೇವೆ. ಹಾಗೂ ಮನ್ ಮುಲ್ ವ್ಯಾಪ್ತಿಯ ಎಲ್ಲಾ ಸಹಕಾರ ಸಂಘಗಳಲ್ಲಿ ಡಿಜಿಟಲೀಕರಣ ಮಾಡಲಾಗಿದ್ದು, ತಂತ್ರಾಂಶವನ್ನು ಅಳವಡಿಸಿಕೊಂಡು ಮಾನವ ರಹಿತವಾಗಿ ಹಾಲು ಶೇಖರಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ಸಹಕಾರ ಸಪ್ತಾಹದ ಅಂಗವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮ ಕುರಿತು ಡಾ. ದಿವ್ಯ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೋಗಿಗೌಡ, ಚಲುವರಾಜು, ಪಿ.ಸಂದರ್ಶ್, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ತೈಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಂಕಪ್ಪ, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟದ ವಿಶೇಷಾಧಿಕಾರಿ ಕೆ.ಅನಿತಾ, ಟಿಎಪಿಸಿಎಂಎಸ್ ಆಡಳಿತಾಧಿಕಾರಿ ಎಚ್.ಆರ್.ನಾಗಭೂಷಣ್, ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಅಕಲಪ್ಪರೆಡ್ಡಿ ಉಪ ವ್ಯವಸ್ಥಾಪಕ ಡಾ.ಎ.ಎನ್ ಮಂಜೇಶ್ ಗೌಡ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರು, ವಿಸ್ತರಣಾಧಿಕಾರಿಗಳು ಹಾಗೂ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.
ವಿಜಯಪುರ ವಿಮಾನ ನಿಲ್ದಾಣಕ್ಕೆ ಅಡ್ಡಿ ನಿವಾರಣೆ: ಸುಪ್ರೀಂಕೋರ್ಟ್ ನಿಲುವಿಗೆ ಎಂ.ಬಿ.ಪಾಟೀಲ ಸ್ವಾಗತ
ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ








