ಶಿವಮೊಗ್ಗ : ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೂತನವಾಗಿ ಆರಂಭಿಸಿರುವ ಜಾಲತಾಣದಲ್ಲಿ ಜಿಲ್ಲೆಯ ವಿಶೇಷವಾದ, ಅತ್ಯದ್ಭುತವಾದ ಛಾಯಾಚಿತ್ರಗಳು, ವಿಡಿಯೋ ತುಣುಕುಗಳು, ಮತ್ತಿತರ ಮಾಹಿತಿಯನ್ನು ಅಳವಡಿಸಿರುವುದು ಅತ್ಯಂತ ಪ್ರಶಂಸನಾರ್ಹ ಸಂಗತಿಯಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಜಾಲತಾಣದಲ್ಲಿ ಜಿಲ್ಲೆಯ 61ಕ್ಕೂ ಹೆಚ್ಚಿನ ಜಿಲ್ಲೆಯ ಪ್ರವಾಸಿ ತಾಣಗಳು, ಸ್ಥಳ ಐತಿಹ್ಯ, ವ್ಯಕ್ತಿಚಿತ್ರ, ವಿಶ್ವ ಪ್ರಸಿದ್ಧ ಜೋಗದ ಜಲಪಾತ, ನಗರಕೋಟೆ, ಕೊಡಚಾದ್ರಿ ತಪ್ಪಲು, ವನ್ಯ ಮೃಗಗಳು, ಸಸ್ಯ ಸಂಪತ್ತು ಸೇರಿದಂತೆ ಸಹಸ್ರಾರು ವಿವಿಧ ಮಾಹಿತಿಯನ್ನು ಒದಗಿಸಿರುವುದು ಜಗತ್ತಿನ ಹಲವು ಭಾಗಗಳಲ್ಲಿ ವಾಸಿಸುವವರನ್ನು ಆಕರ್ಷಸುವಂತೆ ಮಾಡಿರುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದವರು ಪ್ರಶಂಸಿದರು.
ಆಳಿದ ಮೇಲೂ ಶಾಶ್ವತವಾಗಿ ಉಳಿಯುವುದು ವ್ಯಕ್ತಿಯ ಸಾಧನೆ ಮಾತ್ರ ಎಂದ ಅವರು, ಸರ್ಕಾರ ಈ ಹಿಂದೆ ಘೋಷಣೆ ಮಾಡಿದ್ದ ಜಿಲ್ಲೆಯ 41ಸ್ಥಳಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪನವರ ಸಮಾಧಿ ಸ್ಥಳ ಸೊರಬ ಪಟ್ಟಣದ ಬಂಗಾರಧಾಮ ಸೇರಿದಂತೆ ಇನ್ನೂ 20 ಹೊಸ ಸ್ಥಳಗಳನ್ನು ಸೇರ್ಪಡೆಗೊಳಿಸಿ, 61ಸ್ಥಳಗಳ ಪಟ್ಟಿ ಬಿಡುಗಡೆಗೊಳಿಸಿರುವುದು ಬಂಗಾರಪ್ಪನವರ ಮಗನಾಗಿ ನನಗೆ ಸಂತಸ ತಂದಿದೆ ಎಂದರು.
ಜಿಲ್ಲೆಯಲ್ಲಿ ಹಲವು ವೈಶಿಷ್ಟಪೂರ್ಣ ವಿಶೇಷ ಹಾಗೂ ಆಕರ್ಷಕ ಸ್ಥಳಗಳಿವೆ. ಅವುಗಳನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವೂ ಇದೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಿಂದಾಗಿ ಪರೋಕ್ಷವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.
ಅಂತೆಯೇ ಜಿಲ್ಲೆಗೆ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಸುವ ನಿಟ್ಟಿನಲ್ಲಿ ಜೋಗದ ಜಲಪಾತದ ಅಭಿವೃದ್ದಿ, ಚಂದ್ರಗುತ್ತಿ ಪ್ರಾಧಿಕಾರ ರಚಿಸಿ, ಅದರ ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡಿ, 200ಕೋಟಿ ರೂ. ಗಳ ವೆಚ್ಚದಲ್ಲಿ ಜಿಲ್ಲೆಯ ಪ್ರವಾಸಿ ತನಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಅದರಲ್ಲೂ ವಿಶೇವಾಗಿ ಜೋಗದಲ್ಲಿ ರೋಪ್ ವೇ, ಸಂಗೀತ ಕಾರಂಜಿ, ಜಿಪ್ ಲೈನ್, ಗ್ಲಾಸ್ ಹೌಸ್, ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡುವಲ್ಲಿ ಗಮನ ಹರಿಸಲಾಗುತ್ತಿದೆ ಎಂದ ಅವರು ಕೊಡಚಾದ್ರಿ ತಪ್ಪಲು ಪ್ರದೇಶಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದವರು ನುಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಆರ್ಥಿಕ ನೆರವು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ವಿಕಾಸಕ್ಕೆ ಕ್ರಮ ವಹಿಸಲಾಗಿದೆ. ನೂತನ ಜಾಲತಾಣ ವಿನ್ಯಾಸ ಮಾಡುವಲ್ಲಿ ಸ್ಥಳೀಯ ಪ್ರತಿಭಾವಂತರ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಅಲ್ಲದೆ ಆಯೋಜಿಸಲಾಗಿದ್ದ ಹಲವು ಸ್ಪರ್ಧೆಗಳಲ್ಲಿನ ಆಕರ್ಷಕ ಛಾಯಾ ಚಿತ್ರಗಳು, ರೀಲ್ಸ್, ವಿಡಿಯೋ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಸಿಇಓ ಎನ್. ಹೇಮಂತ್ ಕುಮಾರ್ ಅವರು ಮಾತನಾಡಿ, ನೂತನ ವೆಬ್ಸೈಟ್ ನಲ್ಲಿ ಇಲ್ಲಿನ ಗುಡಿ ಕೈಗಾರಿಕೆ, ಪ್ರವಾಸಿ ತಾಣಗಳನ್ನು ಸೇರಿಸಲಾಗಿದೆ ಎಂದರು.
ಪ್ರವಾಸೋದ್ಯಮವನ್ನು ಉತ್ತೇಜಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ವಿವಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಪುರಸ್ಕಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಕ್ಕೂ ಮುನ್ನ ರಂಗಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಪ್ರವಾಸಿತಾಣಗಳ ಆಕರ್ಷಕ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಛಾಯಾಚಿತ್ರ ಪ್ರದರ್ಶನವು ಇಂದಿನಿಂದ 5 ದಿನಗಳ ಕಾಲ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸಿಸಿಎಫ್ ಹನುಮಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಜಿ. ಕೆ. ಮಿಥುನ್ ಕುಮಾರ್, ಪ್ರೊಬಷನರ್ ಅಧಿಕಾರಿ ನಾಗೇಂದ್ರ ಬಾಬು, ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಧರ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.
BREAKING: ಕನ್ನಡದ ಬಿಗ್ ಬಾಸ್ ಶೋಗೆ ಬಾಂಬ್ ಇಡೋದಾಗಿ ಇನ್ ಸ್ಟಾಗ್ರಾಮ್ ನಲ್ಲಿ ಯುವಕ ಬೆದರಿಕೆ