ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ‘ಓದುವ ಬೆಳಕು’ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿಗಳ ಅರಿವು ಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿಜ್ಞಾನ ಚಟುವಟಿಕೆಗಳೊಂದಿಗೆ ಮಕ್ಕಳಿಗಾಗಿ ಆಗಸ್ಟ್ ತಿಂಗಳ ಕಾರ್ಯಕ್ರಮಗಳನ್ನು ಸಜ್ಜುಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2025ರ ಆಗಸ್ಟ್ ತಿಂಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಕ್ಕಳಿಗಾಗಿ ದೇಶಪ್ರೇಮ ಮೆರೆವ ಪ್ರೇರಣಾತ್ಮಕ ಹಾಗೂ ವೈಜ್ಞಾನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮಾಸ ಪೂರ್ಣ ‘ಭಾರತದ ಸ್ವಾತಂತ್ರ್ಯ ದಿನಾಚರಣೆ’ ಸಂಭ್ರಮೋತ್ಸವ ಆಚರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಘಟನೆಗಳು, ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಪುಸ್ತಕಗಳ ಗಟ್ಟಿ ಓದು ಮಾಡುವುದು, ಭಾಷಣಗಳು ಮತ್ತು ಚರ್ಚೆಗಳನ್ನು ಏರ್ಪಡಿಸುವುದು, ಮಕ್ಕಳೇ ತಯಾರಿಸಿದ ತ್ರಿವರ್ಣ ಧ್ವಜ ಬ್ಯಾಡ್ಜನ್ನು ಆಗಸ್ಟ್ 15ರಂದು ಧರಿಸಲು ಮಕ್ಕಳನ್ನು ಸಿದ್ಧಪಡಿಸುವುದು, ಪ್ರಬಂಧ, ಕವನ, ಚಿತ್ರರಚನೆ ಮಾಡಲು ಅವಕಾಶ ಕಲ್ಪಿಸುವುದು, ಮಕ್ಕಳು ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ಓದುವಂತೆ ಪ್ರೋತ್ಸಾಹಿಸುವುದು, ದೇಶಭಕ್ತಿ ಗೀತೆಗಳ ಅಭ್ಯಾಸ ಹಾಗೂ ಗಾಯನ ಮತ್ತು ದೇಶಭಕ್ತರ ಸಾಕ್ಷ್ಯಚಿತ್ರಗಳ ಪ್ರದರ್ಶನ, ಸ್ವಾತಂತ್ರ ಹೋರಾಟಗಾರರ ಪರಿಚಯ, ಸ್ಥಳೀಯ ಹಿರಿಯರು, ಶಿಕ್ಷಕರನ್ನು ಒಳಗೊಂಡಂತೆ ‘ನಾನು ಮತ್ತು ನನ್ನ ದೇಶ’ ಕುರಿತು ಮಕ್ಕಳಿಂದ ಚರ್ಚೆಗಳನ್ನು ನಡೆಸುವುದರ ಮೂಲಕ ದೇಶಭಕ್ತಿ ಉದ್ದೀಪನಗೊಳಿಸುವುದು ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನಿಡಿದ್ದಾರೆ.
ವಿಜ್ಞಾನ ಚಟುವಟಿಕೆ:
ಅರಿವು ಕೇಂದ್ರಗಳಲ್ಲಿ ‘ಕ್ರೀಮ್ ಬಿಸ್ಕೆಟ್ ಜೊತೆ ಚಂದ್ರನ ಹಂತಗಳು’ ಎಂಬ ವಿಶೇಷ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಆಗಸ್ಟ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿರುವ ಸಚಿವರು, ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ಸಹಕಾರದಲ್ಲಿ ಈ ವಿಜ್ಞಾನ ಚಟುವಟಿಕೆ ಕೈಗೊಳ್ಳಲಾಗುತ್ತಿದೆ, ಚಂದ್ರನ ವೃದ್ಧಿಸುವ ಮತ್ತು ಕ್ಷೀಣಿಸುವ ವಿವಿಧ ಹಂತಗಳನ್ನು ಬಿಸ್ಕೆಟ್ ಬಳಸಿ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ಬೋಧನೆ – ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ವಿನೋದದ ಕಸರತ್ತುನಡೆಸಲಾಗುವುದು, ಈ ಚಟುವಟಿಕೆಯು ಮಕ್ಕಳಲ್ಲಿ ನಿಗಾಶಕ್ತಿ (observation skills), ಕಲ್ಪನೆ (imagination) ಮತ್ತು ಸೃಜನಶೀಲತೆಯನ್ನು (creativity) ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.
ಅರಿವು ಕೇಂದ್ರಗಳಲ್ಲಿ ಪ್ರತಿ ತಿಂಗಳೂ ಹಲವಾರು ಅಭಿಯಾನಗಳ ಮೂಲಕ ಮಕ್ಕಳಿಗಾಗಿ ಉಪಯುಕ್ತ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಲಿಯುವುದರ ಜೊತೆಗೆ ಅವರ ಅರಿವಿನ ಬೆಳಕು ಪ್ರಖರಗೊಳ್ಳಲು ಕಾರಣವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹೇಳಿದ್ದಾರೆ.
GOOD NEWS: ಪ್ರವಾಸೋದ್ಯಮ ಇಲಾಖೆಯಿಂದ ‘ಹೊಂಸ್ಟೇ ನಿರ್ಮಿಸಲು ಸಹಾಯಧನ’ಕ್ಕೆ ಅರ್ಜಿ ಆಹ್ವಾನ
CRIME NEWS: ಬಳ್ಳಾರಿಯಲ್ಲಿ ಪುಂಡರ ಗುಂಪಿನಿಂದ ಯುವಕನ ಮೇಲೆ ‘ಡೆಡ್ಲಿ ಅಟ್ಯಾಕ್’