ಬೆಳಗಾವಿ : ಪ್ರಸಕ್ತ ಮಾನ್ಸೂನ್ ಋತುವಿನಲ್ಲಿ ರಾಜ್ಯಕ್ಕೆ ಉತ್ತಮ ಮಳೆಯಾಗಲಿದೆ. ಹಲವೆಡೆ ಪ್ರವಾಹ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳನ್ನು ಮೊದಲೇ ಗುರುತಿಸಿ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.
ಬೆಳಗಾವಿಯ ಸುವರ್ಣಸೌಧ ಭವನದಲ್ಲಿ ಶನಿವಾರ ಬೆಳಗಾವಿ ವಿಭಾಗದ ಜಿಲ್ಲೆಗಳ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಹಾಗೂ ಮಳೆ, ಪ್ರವಾಹ ವಿಷಯದ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಮೊದಲಿಗೆ ಕಳೆದ ಒಂದು ವರ್ಷದಲ್ಲಿ ಬೆಳಗಾವಿ ವಿಭಾಗದಲ್ಲಿ ಸಾಕಷ್ಟು ಪ್ರಗತಿ ಕೆಲಸಗಳಾಗಿರುವುದನ್ನು ತಿಳಿಸಿ ಅಧಿಕಾರಿಗಳಿಗೆ ಅಭಿನಂದಿಸಿದರು. ಆದರೂ, ಕೆಲವು ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸೂಚಿಸಿದರು.
ಮಳೆಗಾಲ ನಿರ್ವಹಣೆ ಬಗ್ಗೆ ಗಮನ ಸೆಳೆದ ಅವರು, “ಈ ವರ್ಷದ ಮಳೆಗಾಲದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಹೀಗಾಗಿ ಹಲವಾರು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಜನ ಪ್ರವಾಹಕ್ಕೆ ತುತ್ತಾಗಿ ಅವಘಡಗಳು ಸಂಭವಿಸಿದ ನಂತರ ಅಧಿಕಾರಿಗಳು ಎದ್ದುಬಿದ್ದು ಹೋಗೋದಕ್ಕಿಂತ ಮೊದಲೇ ಒಂದು ತಂಡ ರಚಿಸಿ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕು” ಎಂದು ಕಿವಿಮಾತು ಹೇಳಿದರು.
“ಯಾವ ತಾಲೂಕುಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ, ಯಾವ ಪ್ರದೇಶ ಪ್ರವಾಹಕ್ಕೆ ತುತ್ತಾಗಬಹುದು? ಎಂಬ ಕುರಿತು ಈಗಲೇ ಒಂದು ಪಟ್ಟಿ ತಯಾರಿಸಿ. ಅಂತಹ ಭಾಗದಲ್ಲಿ ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಪಂಚಾಯತ್ ದೊಡ್ಡ-ಸಣ್ಣ ನೀರಾವರಿ ಅಧಿಕಾರಿಗಳನ್ನೊಳಗೊಂಡ ಒಂದು ತಂಡ ರಚಿಸಿ. ಮಳೆಗಾಲ ಮುಗಿಯುವ ವರೆಗೂ ಪ್ರತಿಯೊಂದು ತಾಲೂಕಿನಲ್ಲೂ ಇಂತಹದ್ದೊಂದು ತಂಡ ರಚಿಸಿ ಕಾರ್ಯಪ್ರವೃತ್ತರಾಗಿ, ತುಂಬಾ ಸಮಸ್ಯೆ ಉಂಟಾಗಬಹುದಾದ ಪಂಚಾಯತ್ ಮಟ್ಟದಲ್ಲೂ ತಂಡ ರಚಿಸಿ” ಎಂದು ಸೂಚಿಸಿದರು.
ಅಲ್ಲದೆ, “ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಗಳ ಜೊತೆಗೆ ಪ್ರತಿವಾರ ಸಭೆ ನಡೆಸಬೇಕು, ಮಳೆ-ಪ್ರವಾಹ ಪರಿಸ್ಥಿತಿ ಹತೋಟಿಯಲ್ಲಿರುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಜನರಿಗೆ ಮಾಹಿತಿ ನೀಡಬೇಕು. ಹೀಗೆ ಮಾಡಿದಲ್ಲಿ ಮಾತ್ರ ಜನರಿಗೂ ಸರ್ಕಾರ ಮತ್ತು ಅಧಿಕಾರಿ ವರ್ಗದ ಮೇಲೆ ನಂಬಿಕೆ ಮೂಡುತ್ತದೆ. ನಮ್ಮ ಪ್ರಯತ್ನಗಳ ಬಗ್ಗೆ ವಿಶ್ವಾಸ ಮೂಡುತ್ತದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
Good News: ‘ಬಗರ್ ಹುಕುಂ’ ಸಾಗುವಳಿದಾರರಿಗೆ ಗುಡ್ ನ್ಯೂಸ್: ಶೀಘ್ರವೇ ಅರ್ಜಿ ವಿಲೇವಾರಿ: ಸಚಿವ ಕೃಷ್ಣ ಭೈರೇಗೌಡ
ಉದ್ಯೋಗ ವಾರ್ತೆ: ‘ಪ್ರವಾಸಿ ಮಾರ್ಗದರ್ಶಿ ಹುದ್ದೆ’ಗಳಿಗಾಗಿ ಅರ್ಜಿ ಆಹ್ವಾನ