ಬೆಂಗಳೂರು: ರಾಜ್ಯಾಧ್ಯಂತ ಸಾವಿರಾರು ಮಂದಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನೌಕರರಿಗೆ ಕಳೆದ 6 ತಿಂಗಳಿನಿಂದ ವೇತನ ನೀಡಿಲ್ಲ. ಹೀಗಾಗಿ ರಾಜ್ಯಾಧ್ಯಂತ ಅಸಹಕಾರ ಪ್ರತಿಭಟನೆ ಆರಂಭಿಸಿದ್ದಾರೆ. ಈ ಕಾರಣ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿ, ಜನರು ಪರದಾಡುವಂತೆ ಆಗಿದೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ನರೇಗಾ ನೌಕರರ ಸಂಘದ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಅವರು, ರಾಜ್ಯ ಸರ್ಕಾರಕ್ಕೆ ಕಳೆದ ಹಲವು ತಿಂಗಳಿನಿಂದ ನೌಕರರ ಬಾಕಿ ವೇತನ ಬಿಡುಗಡೆ ಮನವಿ ಮಾಡಿದ್ದರೂ ಈವರೆಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ ನೌಕರರು ರಾಜ್ಯಾಧ್ಯಂತ ಕೆಲಸ ತೊರೆದು ಅಸಹಕಾರ ಪ್ರತಿಭಟನೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.
ನರೇಗಾ ನೌಕರರಿಗೆ ವೇತನ ಬಾಕಿಗೆ ಕೇಂದ್ರ ಸರ್ಕಾರ ಅನುದಾನ ಮಂಜೂರು ಮಾಡಿರದೇ ಇರೋದು ಕಾರಣ ಎಂಬುದಾಗಿ ರಾಜ್ಯ ಸರ್ಕಾರ ಆರೋಪಿಸುತ್ತಿದೆ. ಅನುದಾನ ಮಂಜೂರಾದ ನಂತ್ರ ಈಗ ರಾಜ್ಯ ಸರ್ಕಾರ ಟೆಕ್ನಿಕಲ್ ಸಮಸ್ಯೆ ಆಗಿದೆ. ಬಿಡುಗಡೆ ಆಗಲಿದೆ, ಆಗಲಿದೆ ಎನ್ನುತ್ತಲೇ ತಿಂಗಳೇ ಕಳೆಯಿತು. ಈವರೆಗೆ ನರೇಗಾ ನೌಕರರ ವೇತನ ಪಾವತಿ ಮಾಡಿಲ್ಲ ಎಂಬುದಾಗಿ ಕಿಡಿಕಾರಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಇನ್ನೊಂದು ಎರಡು ಮೂರು ದಿನಗಳಲ್ಲಿ ಸಮಸ್ಯೆ ಸರಿಪಡಿಸಿ, ನೌಕರರಿಗೆ ವೇತನ ಪಾವತಿ ಮಾಡುವಂತ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನರೇಗಾ ನೌಕರರಿಗೆ ವೇತನ ಪಾವತಿ ವಿಳಂಬವೇಕೆ ಗೊತ್ತಾ?
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪಾವತಿ ವಿಧಾನ ತುಂಬಾನೇ ಸರಳೀಕರಣವಾಗಿದ್ದರೇ, ನರೇಗಾ ನೌಕರರ ವೇತನ ಪಾವತಿ ಮಾತ್ರ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಗಾಧೆಯಂತ ವ್ಯವಸ್ಥೆಯಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಡಿಡಿಓಗಳು ಕಜಾನೆಗೆ ವೇತನ ಪಾವತಿಗೆ ನೀಡಿದರೇ, ಅಲ್ಲಿಂದ ಕೆ2 ಮೂಲಕ ನೌಕರರಿಗೆ ವಿಳಂಬವಿಲ್ಲದೇ ಪಾವತಿಯಾಗಲಿದೆ. ಆದರೇ ನರೇಗಾ ನೌಕರರ ವೇತನ ಪಾವತಿ ವಿಧಾನವೇ ಬೇರೆ.
ಮೊದಲು ಸಂಬಂಧಿತ ಇಲಾಖೆಯ ಮುಖ್ಯಸ್ಥರಿಂದ ಸಹಿ ಮಾಡಿಸಿ ವೇತನ ಪಾವತಿಗೆ 2ನೇ ಹಂತದ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಕಜಾನೆಯ ಕೆ2ಗಳಿಗೆ ವೇತನ ಪಾವತಿ ಬಿಲ್ ವರ್ಗಾವಣೆ. ಆ ಬಳಿಕ ಜಿಲ್ಲಾ ಡಿಡಿಓ, ನಂತ್ರ ರಾಜ್ಯ ಡಿಡಿಓ ಆ ಬಳಿಕ ಸೆಂಟ್ರಲ್ ಪ್ರೋಸೆಸ್ಸಿಂಗ್ ಸಿಸ್ಟಂಗೆ ನರೇಗಾ ನೌಕರರ ವೇತನ ಪಾವತಿ ಮಾಡಿ ಸ್ವಾಮಿ ಎನ್ನುವ ರೀತಿಯಲ್ಲಿ ಫೈಲ್ ಹೋಗುತ್ತದೆ.
ಇನ್ನೂ ಸಿಪಿಎಸ್ ಬಳಿಕ ಪಿಎಫ್ಎಂಎಸ್, ಇ-ಕುಬೇರ್, ಆರ್ ಬಿ ಐ ಅಕೌಂಟ್ ಗೆ ತೆರಳಿ, ಅಲ್ಲಿಂದ ಏಜೆನ್ಸಿಗಳಿಗೆ ನರೇಗಾ ನೌಕರರ ವೇತನ ಪಾವತಿಗೆ ಹಣ ಬಿಡುಗಡೆ. ಏಜೆನ್ಸಿಯಿಂದ ನರೇಗಾ ನೌಕರರ ಬ್ಯಾಂಕ್ ಖಾತೆಗೆ ವೇತನ ಪಾವತಿಯಾಗಲಿದೆ.
ಇಷ್ಟು ಸರ್ಕಸ್ ಹೊಡೆಯೋದಕ್ಕೆ ವಾರಗಟ್ಟಲೇ ಸುತ್ತಲಿದೆ. ಕೆಲವೊಮ್ಮೆ ಟೆಕ್ನಿಕಲ್ ಸಮಸ್ಯೆಯಾದ್ರೇ ಎರಡು, ಮೂರು ವಾರವಾದರೂ ಆಗಬಹುದು. ಇಲ್ಲವೇ ತಿಂಗಳೂ ಆಗುತ್ತದೆ ಎಂಬುದು ನೌಕರರ ಮಾಹಿತಿ.
ರಾಜ್ಯ ಸರ್ಕಾರ ಹೇಳುತ್ತಿರುವ ಟೆಕ್ನಿಕಲ್ ಸಮಸ್ಯೆ ಏನು ಗೊತ್ತಾ?
ಒಂದೆಡೆ ನರೇಗಾ ನೌಕರರಿಗೆ ವೇತನ ಪಾವತಿಗೆ 11 ಹಂತಗಳನ್ನು ಪೂರೈಸಬೇಕಿದ್ದರೇ, ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎರಡು ಸಾಫ್ಟ್ ವೇರ್ ಗಳ ಸಮಸ್ಯೆ ಉದ್ಭವಿಸಿ, ಮತ್ತೊಂದಷ್ಟು ತಿಂಗಳು ವೇತನ ಪಾವತಿಗೆ ತಡವಾಗುತ್ತಿರುವ ಹಿಂದಿನ ಕಾರಣವಾಗಿದೆ.
ರಾಜ್ಯ ಸರ್ಕಾರದಿಂದ ಕೆ2 ಅಡಿಯಲ್ಲಿ ವೇತನ ಪಾವತಿ ವ್ಯವಸ್ಥೆಯಿದೆ. ಇದಕ್ಕೆ ಮಧ್ಯೆವರ್ತಿ ಎನ್ನುವಂತೆ ಕೇಂದ್ರ ಸರ್ಕಾರದಿಂದಲೂ ಸೆಂಟ್ರಲ್ ಪ್ರೋಸೆಸ್ಸಿಂಗ್ ಸಿಸ್ಟಂ ಸಾಫ್ಟ್ ವೇರ್ ತರಲಾಗಿದೆ. ಆದರೇ ಕೆ2ನಿಂದ ಕೇಂದ್ರ ಸರ್ಕಾರದ ಸಿಪಿಎಸ್ ಸಾಫ್ಟ್ ವೇರ್ ಗೆ ವರ್ಗಾವಣೆಯಾಗಬೇಕಾಗಿದ್ದ ನರೇಗಾ ನೌಕರರ ಡೇಟಾ ಮಾತ್ರ ಆಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇದೇ ಕಾರಣದಿಂದಾಗಿ ಕಳೆದ 6 ತಿಂಗಳಿನಿಂದ ನರೇಗಾ ನೌಕರರ ವೇತನ ಪಾವತಿಯಾಗದೇ ವಿಳಂಬವಾಗಿದೆ ಎನ್ನುವುದಾಗಿ ತಿಳಿದು ಬಂದಿದೆ.
3 ದಿನದಲ್ಲಿ ಸಮಸ್ಯೆ ಕ್ಲಿಯರ್ ಎಂದ ಸಚಿವ ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನೌಕರರ ಸಂಘದಿಂದ ಭೇಟಿಯಾಗಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಲಾಗಿದೆ. ಈ ವೇಳೆಯಲ್ಲಿ ಮೂರು ದಿನಗಳಲ್ಲಿ ಪಾವತಿ ಮಾಡುವಂತ ಭರವಸೆ ನೀಡಿದ್ದಾರೆ. ಜೊತೆ ಜೊತೆಗೆ ತಾಂತ್ರಿಕ ಸಮಸ್ಯೆ ನಿವಾರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ಮೂರು ದಿನಗಳಲ್ಲಿ ನರೇಗಾ ನೌಕರರಿಗೆ ಬಾಕಿ ವೇತನ ಪಾವತಿಯಾಗೋ ಸಾಧ್ಯತೆ ಇದೆ. ಅದು ಸಾಧ್ಯವಾಗುತ್ತಾ? ನರೇಗಾ ನೌಕರರ ಬಾಕಿ ವೇತನ ಬಿಡಗಡೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು
ಸಿಎಂ ಸಿದ್ಧರಾಮಯ್ಯ ಮೇಲೆ ಕಾಂಗ್ರೆಸ್ಸಿನ ಶಾಸಕರಿಗೇ ವಿಶ್ವಾಸ ಇಲ್ಲವಾಗಿದೆ: ರಾಜಕುಮಾರ ಪಾಟೀಲ ತೇಲ್ಕೂರ