ಮಂಡ್ಯ : ಒಂದು ಕಾಲದಲ್ಲಿ ರೈತರು ಬೇಸಾಯ ಮಾಡುವ ಮುಂಚೆ ಕಲ್ಯಾಣಿಯ ನೀರನ್ನು ಹಾಕಿ ಪೂಜೆ ಸಲ್ಲಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂಬ ನಂಬಿಕೆ ಬೇರೂರಿತ್ತು. ಅನಾರೋಗ್ಯಕ್ಕಿಡಾದವರು ಕಲ್ಯಾಣಿಯ ನೀರನ್ನು ಕುಡಿದರೆ ಗುಣಮುಖರಾಗುತ್ತಾರೆ ಎಂಬ ನಂಬಿಕೆಯೂ ಇತ್ತು. ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರ ಹಾಗೂ ಕುಡಿಯುವ ನೀರಿನ ಮೂಲವಾಗಿದ್ದ ಕಲ್ಯಾಣಿ ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ಜೀವ ಜಲ ಇದ್ದರೂ ಕಸ, ಕಡ್ಡಿಗಳಿಂದ ಹೂಳು ತುಂಬಿ ತ್ಯಾಜ್ಯ ರಾಶಿಯಲ್ಲಿ ಬಹುತೇಕ ಮುಚ್ಚಿ ಹೋಗಿದ್ದವು. ಇದಕ್ಕೆಲ್ಲ ನರೇಗಾ ಯೋಜನೆ ಮತ್ತು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ತಿಲಾಂಜಲಿ ಇಟ್ಟಿದ್ದು, ಕಲ್ಯಾಣಿಗೆ ಹೊಸ ಕಳೆ ಬಂದು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಗನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆ ಮತ್ತು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿವೃದ್ಧಿ ಪಡಿಸಿರುವ ಕಲ್ಯಾಣಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ಹಾಗೂ ಟ್ರಸ್ಟ್ ನ ಅಧ್ಯಕ್ಷ ನಂದೀಶ್ ಗೌಡ ಅವರು ಬುಧವಾರ ಲೋಕಾರ್ಪಣೆ ಮಾಡಿದರು.
ಇದೇ ವೇಳೆ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ನಂದೀಶ್ ಗೌಡ ಅವರು, ಹುಳಗನಹಳ್ಳಿ ಗ್ರಾಮದ ಶ್ರೀ ಮಂಚಮ್ಮ ಹಾಗೂ ಶ್ರೀ ಬಸವೇಶ್ವರ ದೇವಾಲಯಗಳ ಧಾರ್ಮಿಕ ಶ್ರದ್ದಾ ಕೇಂದ್ರವಾಗಿದ್ದ ದೇವರ ಕಟ್ಟೆ ಹಲವು ವರ್ಷಗಳಿಂದ ಜೀವಜಲವಿದ್ದರೂ ನಿರ್ವಹಣೆ ಕೊರತೆಯಿಂದ ತ್ಯಾಜ್ಯ ರಾಶಿಯಲ್ಲಿ ಮುಚ್ಚಿ ಹೋಗಿತ್ತು. ಹಬ್ಬ ಹರಿದಿನಗಳಲ್ಲಿ ದೇವಾಲಯಗಳ ಪೂಜಾ ಕಾರ್ಯಗಳಿಗೆ ನೀರಿನ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ ಕಲ್ಯಾಣಿ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ನಿರ್ಣಯ ಮಾಡಲಾಗಿತ್ತು.
ಕಲ್ಯಾಣಿ ಅಭಿವೃದ್ಧಿಗೆ 25 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ರೂಪುರೇಷೆ ಸಿದ್ದವಾಯಿತು. ನರೇಗಾ ಮತ್ತು ಪಂಚಾಯಿತಿಯಿಂದ 13 ಲಕ್ಷ ರೂ ಅನುದಾನ ಬಿಡುಗಡೆಯಾಯಿತು. ಆದರೆ, ಕಲ್ಯಾಣಿ ಅಭಿವೃದ್ಧಿಗೆ ಅಷ್ಟು ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗದ ಕಾರಣ ಉಳಿಕೆ 12 ಲಕ್ಷ ಹಣವನ್ನು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ನಂದೀಶ್ ಗೌಡ ತಿಳಿಸಿದರು.
ಗ್ರಾಮಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಹ ಕೈ ಜೋಡಿಸಿದರೆ ಮಾತ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಸಾಧ್ಯ. ಈಗಾಗಲೇ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೂಲಭೂತ ಸೌಲಭ್ಯ, ಶಾಲಾ ಮಕ್ಕಳಿಗೆ ಮೊಟ್ಟೆ, ಆಟೋ ವ್ಯವಸ್ಥೆ ಹಾಗೂ ಸಮವಸ್ತ್ರಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರಲಾಗುತ್ತಿದ್ದು, ಮುಂದೆಯೂ ಟ್ರಸ್ಟ್ ವತಿಯಿಂದ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಮಧುಸೂಧನ್, ಸದಸ್ಯರಾದ ಅಪ್ಪಾಜಿಗೌಡ, ಚಲುವರಾಜು, ಸೌಭಾಗ್ಯಮ್ಮ, ಜ್ಯೋತಿ ಪಿಡಿಒ ಲೀಲಾವತಿ, ಸಿಬ್ಬಂದಿ ಜಗದೀಶ್ ಗ್ರಾಮದ ಮುಖಂಡರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಹಿರಿಯ ಸಾಹಿತಿ ಎಸ್‌ಎಲ್ ಭೈರಪ್ಪ ಇನ್ನಿಲ್ಲ | SL Bhyrappa is no more
ಸಾಗರದಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ