ಬೆಂಗಳೂರು: ರಾಷ್ಟ್ರಪತಿಗಳ ಮತ್ತು ಉಪ-ರಾಷ್ಟ್ರಪತಿಗಳ ಚುನಾವಣಾ ಅಧಿನಿಯಮ, 1952ರ 4ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ಭಾರತದ ಉಪ ರಾಷ್ಟ್ರಪತಿಯವರ ಅಧಿಕಾರ ಪದವನ್ನು ತುಂಬಲು ಚುನಾವಣೆಯನ್ನು ನಡೆಸುವುದಕ್ಕಾಗಿ ಭಾರತ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಚುನಾವಣಾ ಅಧಿಕಾರಿಯಾಗಿರುವ ಪಿ.ಸಿ.ಮೋದಿಯವರನ್ನು ಚುನಾವಣಾ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಚುನಾವಣೆ ಸಂಬಂಧ ಅವರು ಮುಂದಿನ ನೋಟೀಸನ್ನು ನೀಡಿದ್ದಾರೆ.
ನಾಮಪತ್ರಗಳನ್ನು ಅಭ್ಯರ್ಥಿಯಾಗಲೀ ಅಥವಾ ಅವರ ಸೂಚಕರು ಅಥವಾ ಅನುಮೋದಕರ ಪೈಕಿ ಯಾರೇ ಆಗಲಿ ಈ ಕೆಳಗೆ ಸಹಿ ಮಾಡಿದವರಿಗೆ ಕೊಠಡಿ ಸಂಖ್ಯೆ ಆರ್‍ಎಸ್-28, ಮೊದಲನೇ ಮಹಡಿ, ಸಂಸತ್ ಭವನ, ನವದೆಹಲಿ ಇಲ್ಲಿರುವ ಅವರ ಕಛೇರಿಯಲ್ಲಿ ಅಥವಾ ಅವರು ಅನಿರ್ವಾಯವಾಗಿ ಗೈರು ಹಾಜರಾಗಿದ್ದರೆ, ಸಹಾಯಕ ಚುನಾವಣಾಧಿಕಾರಿಗಳಾದ ಕು. ಗರಿಮಾ ಜೈನ್, ಜಂಟಿ ಕಾರ್ಯದರ್ಶಿ/ಶ್ರೀ ವಿಜಯ್ ಕುಮಾರ್, ನಿರ್ದೇಶಕರು, ರಾಜ್ಯ ಸಭಾ ಸಚಿವಾಲಯ ಇವರಿಗೆ ಸದರಿ ಕಛೇರಿಯಲ್ಲಿ (ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ) ಯಾವುದೇ ದಿನ ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 03-00 ಗಂಟೆಯೊಳಗೆ ದಿನಾಂಕ 21-08-2025 ರಂದು ಸಲ್ಲಿಸಬಹುದು.
ಪ್ರತಿಯೊಂದು ನಾಮಪತ್ರದ ಜೊತೆಗೆ ಅಭ್ಯರ್ಥಿಯು ಲೋಕಸಭಾ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಮತದಾರನೆಂದು ನೋಂದಾಯಿತರಾಗಿರುವ ಬಗ್ಗೆ ಪ್ರಮಾಣೀಕೃತ ಪ್ರತಿಯನ್ನು ಲಗತ್ತಿಸತಕ್ಕದ್ದು. ಪ್ರತಿಯೊಬ್ಬ ಅಭ್ಯರ್ಥಿಯು ಹದಿನೈದು ಸಾವಿರ ರೂಪಾಯಿ ಮೊಬಲಗನ್ನು ಮಾತ್ರ ಠೇವಣಿ ಮಾಡತಕ್ಕದ್ದು ಅಥವಾ ಮಾಡಿಸತಕ್ಕದ್ದು. ಈ ಮೊಬಲಗನ್ನು ನಾಮಪತ್ರವನ್ನು ಸಾದರಪಡಿಸುವ ಕಾಲಕ್ಕೆ ಚುನಾವಣಾಧಿಕಾರಿಯ ಬಳಿ ನಗದಾಗಿ ಠೇವಣಿ ಮಾಡಬಹುದು ಅಥವಾ ಮುಂಚಿತವಾಗಿ ಆ ಮೊಬಲಗನ್ನು ಭಾರತದ ರಿಸರ್ವ್ ಬ್ಯಾಂಕಿನಲ್ಲಿ ಅಥವಾ ಸರ್ಕಾರಿ ಖಜಾನೆಯಲ್ಲಿ ಠೇವಣಿ ಮಾಡಬಹುದು ಮತ್ತು ತರುವಾಯದ ಸಂದರ್ಭದಲ್ಲಿ ಆ ಮೊಬಲಗನ್ನು ಹಾಗೆ ಠೇವಣಿ ಮಾಡಲಾಗಿದೆಯೆಂದು ತೋರಿಸುವ ರಸೀದಿಯನ್ನು ನಾಮಪತ್ರಕ್ಕೆ ಲಗತ್ತಿಸುವುದು ಅವಶ್ಯಕವಾಗಿರುತ್ತದೆ.
ನಾಮಪತ್ರದ ನಮೂನೆಗಳನ್ನು ಮೇಲೆ ಹೇಳಿದ ಕಛೇರಿಯಿಂದ ಕಛೇರಿಯ ವೇಳೆಯಲ್ಲಿ ಪಡೆದುಕೊಳ್ಳಬಹುದು ಅಧಿನಿಯಮದ 5ಬಿ ಪ್ರಕರಣ (4)ನೇ ಉಪ-ಪ್ರಕರಣದ ಮೇರೆಗೆ ತಿರಸ್ಕರಿಸಲಾದ ನಾಮಪತ್ರಗಳನ್ನು ಹೊರತುಪಡಿಸಿ ಇತರೆ ನಾಮಪತ್ರಗಳನ್ನು ಸದರಿ ಕಛೇರಿಯಲ್ಲಿ ಅಂದರೆ ಕೊಠಡಿ ಸಂಖ್ಯೆ ಎಫ್-100, ಸಂಗೋಷ್ಟಿ-2, ಮೊದಲನೇ ಮಹಡಿ, ಸಂಸತ್ ಭವನ, ನವದೆಹಲಿಯಲ್ಲಿ ದಿನಾಂಕ 22-08-2025 ರ ಶುಕ್ರವಾರ ಬೆಳಗ್ಗೆ 11-00 ಗಂಟೆಗೆ ಪರಿಶೀಲನೆಗಾಗಿ ತೆಗೆದುಕೊಳ್ಳಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು ಅಭ್ಯರ್ಥಿಯು ಅಥವಾ ಈ. ಸಂಬಂಧದಲ್ಲಿ ಅಭ್ಯರ್ಥಿಯಿಂದ ಲಿಖಿತದಲ್ಲಿ ಅಧಿಕಾರ ಪಡೆದ ಅವರ ಸೂಚಕರು ಅಥವಾ ಅನುಮೋದಕರ ಪೈಕಿ ಯಾರದರೊಬ್ಬರು ಚುನಾವಣಾಧಿಕಾರಿಗೆ ಮೇಲಿನ ಪ್ಯಾರಾ (1)ರಲ್ಲಿ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ 25-08-2025ರ ಮಧ್ಯಾಹ್ನ 3-00 ಗಂಟೆಗೆ ಮುಂಚೆ ಸಲ್ಲಿಸಬಹುದು. ಚುನಾವಣೆಗೆ ಸ್ಪರ್ಧೆಯು ನಡೆಯುವಂತಹ ಸಂದರ್ಭದಲ್ಲಿ 2025ನೇ ಸೆಪ್ಟೆಂಬರ್ 9 ರಂದು ಬೆಳಗ್ಗೆ 10-00 ಗಂಟೆಯಿಂದ ಸಂಜೆ 05-00 ಗಂಟೆಯ ಒಳಗೆ, ನಿಯಮಗಳ ಮೇರೆಗೆ ನಿಗದಿಯಾದ ಮತದಾನದ ಸ್ಥಳದಲ್ಲಿ ಮತದಾನ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ