ಬೆಂಗಳೂರು : ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಅನರ್ಹ ಬಿಪಿಎಲ್ ಕಾರ್ಡ್ ಸಿಕ್ಕಿಬಿದ್ದರೆ ದಂಡದ ಜೊತೆಗೆ ಕಾನೂನು ಕ್ರಮ ಎದುರಿಸಬೇಕು.
ಹೌದು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸಕ್ಕೆ ಆಹಾರ ಇಲಾಖೆ ಮುಂದಾಗಿದೆ. ಈ ಮೂಲಕ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಡವ ಡವ ಶುರುವಾಗಿದೆ. ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಇದುವರೆಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡೆದ ಅಕ್ಕಿ ಹಾಗೂ ಇತರೆ ಧಾನ್ಯಗಳ ಮೊತ್ತವನ್ನು ಮರಳಿಸಬೇಕು ಜೊತೆಗೆ ಕ್ರಿಮಿನಲ್ ಕೇಸ್ ಎದುರಸಬೇಕು.
ರಾಜ್ಯದಲ್ಲಿ ಅಕ್ರಮ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರ ಪತ್ತೆಗೆ ಆಹಾರ ಇಲಾಖೆ ಮುಂದಾಗಿದ್ದು, ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಈ ಪೈಕಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರು, 10,04,716 ಮಂದಿ 1.20 ಲಕ್ಷ ರೂ.ಗಳ ಅಧಿಕ ಆದಾಯ ಹೊರಂದಿರುವವರು, 4,036 ಮಂದಿ ಸರ್ಕಾರಿ ನೌಕರರಿರುವುದು ಪತ್ತೆಯಾಗಿದೆ.
ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು, ಮನೆಗಳನ್ನು ಬಾಡಿಗೆ ಕೊಟ್ಟಿರುವವರು, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು. ಕಳೆದ 6 ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯನ್ನು ಭೇಟಿ ಮಾಡದೇ ಪ್ರತಿ ತಿಂಗಳು ಈ ಕಾರ್ಡದಾರರಿಗೆ ನೀಡುವ ಆಹಾರ ಧ್ಯಾನಗಳನ್ನು ಪಡೆಯದೇ ಇದ್ದಲ್ಲಿ ಇಂತಹ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ ಎನ್ನಲಾಗಿದೆ.