ಬೆಂಗಳೂರು: ಕಂದಾಯ ಇಲಾಖೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಊರಿನ ವ್ಯಾಪ್ತಿಯ ನಕ್ಷೆಯನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಲು ಅವಕಾಶ ನೀಡಲಾಗುತ್ತಿದೆ. ನೀವು ನಿಮ್ಮೂರಿನ ಕಂದಾಯ ನಕ್ಷೆಯನ್ನು ಕುಳಿತಲ್ಲೇ ಡೌನ್ ಲೋಡ್ ಮಾಡಿಕೊಳ್ಳಲು ಮುಂದಿನ ಹಂತಗಳನ್ನು ಅನುಸರಿಸಿ.
ಅತಿ ಪುರಾತನ ಕಾಲದಿಂದಲೂ ಯಾವುದೇ ರೀತಿಯ ಸರ್ಕಾರದಲ್ಲಾಗಲೀ, ಅಂದರೆ, ಚಕ್ರಾದಿsಪತ್ಯ, ರಾಜಪ್ರಭುತ್ವ, ನಿರಂಕುಶಪ್ರಭುತ್ವ ಅಥವಾ ಪ್ರಜಾಪ್ರಭುತ್ವ ಕಾಲದಿಂದಲೂ ಭೂನಿರ್ವಹಣೆ, ಭೂಕಂದಾಯ ಸಂಗ್ರಹಣೆ, ಭೂಮಾಲಿಕತ್ವ ನಿರ್ಬಂಧನೆ ಮತ್ತು ಭೂ ಉಪಯೋಗ ಮತ್ತು ಭೂಸ್ವಾಧೀನ ಹಕ್ಕುಗಳು ಮುಂತಾದವುಗಳೆಲ್ಲವೂ ರಾಜ್ಯ ಸರ್ಕಾರದ ಪ್ರಮುಖ ಜವಾಬ್ದಾರಿಗಳಾಗಿದ್ದವು. ಪ್ರಾಚೀನ ಭಾರತದಲ್ಲಿ ವಾಸ್ತವವಾಗಿ ಸರ್ಕಾರದಲ್ಲಿ ಎರಡು ಇಲಾಖೆಗಳು ಮಾತ್ರ ಅಸ್ತಿತ್ವದಲ್ಲಿರುತ್ತಿದ್ದವು.
ಮೊದಲನೆಯದೆಂದರೆ ಭೂನಿರ್ವಹಣೆ ಮತ್ತು ಭೂಕಂದಾಯ ಇಲಾಖೆ ಮತ್ತು ಎರಡನೆಯದೆಂದರೆ ರಾಜ್ಯವನ್ನು ಬಾಹ್ಯ ದಾಳಿಯ ವಿರುದ್ಧ ಹೋರಾಡಲು ಅಗಾಧವಾದ ಭೂಸೇನೆಯ ರಕ್ಷಣಾ ಇಲಾಖೆ. ಮೊದಲನೇ ಇಲಾಖೆಯು ರಾಜಸ್ವ ಸಂಗ್ರಹಣೆ ಹಾಗೂ ಒಳಾಡಳಿತ ನಿರ್ವಹಣೆಯನ್ನು ಹಾಗೂ ಎರಡನೇ ಇಲಾಖೆಯು ಪ್ರಾಂತ್ಯಗಳ ರಕ್ಷಣೆ ಮತ್ತು ಸಮಗ್ರತೆಯನ್ನು ಬಾಹ್ಯದಾಳಿಗೀಡಾಗುವುದರಿಂದ ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದವು. ಸಮಾಜವು ಹೆಚ್ಚು ವೃದ್ದಿಯಾದಂತೆ ವೃತ್ತಿಗಳಲ್ಲಿನ ತಾರತಮ್ಯ, ರಾಜ್ಯದ ಕ್ಲಿಷ್ಠಕರವಾದ ಆಡಳಿತ ನಿರ್ವಹಣೆಗೆ ವಿಶಿಷ್ಠ ಇಲಾಖೆಗಳು ಹೊರಹೊಮ್ಮಿದವು.
ಕಾಲ ಬದಲಾವಣೆಯಾದಂತೆ ಹಲವಾರು ಇಲಾಖೆಗಳು ರೂಪಿತಗೊಂಡು ಅಸ್ತಿತ್ವಕ್ಕೆ ಬಂದವು. ವಾಸ್ತವದ ಸಂಗತಿಯೆಂದರೆ ಪ್ರಾರಂಭದಲ್ಲಿ ಎಲ್ಲಾ ಇಲಾಖೆಗಳು ಕಂದಾಯ ಇಲಾಖೆಯಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ನಂತರ ಒಂದೊಂದಾಗಿ ಪ್ರತ್ಯೇಕಗೊಂಡವು. ಏನೇ ಆದರೂ ಇಂದಿಗೂ ಸಹ ರಾಜ್ಯದ ಹಾಗೂ ಸಮಾಜದ ಪ್ರಮುಖವಾದ ದೈನಂದಿನ ಕೆಲಸ ಕಾರ್ಯಗಳನ್ನು ಕಂದಾಯ ಇಲಾಖೆಯೇ ನಿರ್ವಹಿಸುತ್ತಿದೆ. ಈ ಕಾರಣಗಳಿಂದಾಗಿಯೇ ಸರ್ಕಾರದಲ್ಲಿ ಕಂದಾಯ ಇಲಾಖೆಯು “ಮಾತೃ ಇಲಾಖೆ”ಯೆಂದು ಕರೆಯಲ್ಪಡುತ್ತದೆ.
ಇಂತ ಕಂದಾಯ ಇಲಾಖೆಯು ಕರ್ನಾಟಕದ ಜನರಿಗೆ ಪ್ರತಿ ಹಳ್ಳಿಯ ಕಂದಾಯ ನಕ್ಷೆಯನ್ನು ಆನ್ ಲೈನ್ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳೋದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು https://landrecords.karnataka.gov.in/service3/ ಗೆ ಭೇಟಿ ನೀಡಿ.
ಈ ಹಂತ ಅನುಸರಿಸಿ, ಕುಳಿತಲ್ಲೇ ಕಂದಾಯ ನಕ್ಷೆ ಡೌನ್ ಲೋಡ್ ಮಾಡಿ
https://landrecords.karnataka.gov.in/service3/ ಈ ಲಿಂಕ್ ಕ್ಲಿಕ್ ಮಾಡಿ, ಕಂದಾಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಈ ಮೇಲ್ಕಂಡ ಲಿಂಕ್ ಕ್ಲಿಕ್ ಮಾಡಿದ ನಂತ್ರ ನಿಮಗೆ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮದ ಆಯ್ಕೆಯನ್ನು ತೋರಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ.
ಇದಾದ ಬಳಿಕ ನಿಮ್ಮ ಹೋಬಳಿಯ ಸಂಪೂರ್ಣ ಹಳ್ಳಿಗಳ ಕಂದಾಯ ನಕ್ಷೆಯನ್ನು ಪಿಡಿಎಫ್ ಪಾರ್ಮೆಟ್ ನಲ್ಲಿ ತೋರಿಸಲಿದೆ.
ನೀವು ನಿಮಗೆ ಬೇಕಾದ ಹಳ್ಳಿಯ ಕಂದಾಯ ನಕ್ಷೆಯನ್ನು ಪಕ್ಕದಲ್ಲಿ ಕಾಣುವಂತ ಪಿಡಿಎಫ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.