ಬೆಂಗಳೂರು : ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಸಲು ನೋಟೀಸ್ ಜಾರಿ ಮಾಡುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಭೂಮಾಪನ ಕಂದಾಯ ವ್ಯವಸ್ಥೆ,ಮತ್ತು ಭೂದಾಖಲೆಗಳ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಭೂವ್ಯಾಜ್ಯಗಳನ್ನು ಮುಂಬರುವ ದಿನಗಳಲ್ಲಿ ತಡೆಗಟ್ಟುವ ಮಹತ್ತರವಾದ ಧೈಯವನ್ನು ಇಲಾಖೆಯು ಹೊಂದಿದ್ದು, ಇದಕ್ಕೆ ಪೂರಕವಾಗಿ 11ಇ ಸ್ಕೆಚ್ ತಯಾರಿಕೆ, ಸಂಯೋಜಿತ ಮ್ಯುಟೇಷನ್ ಪೋಡಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿರುತ್ತದೆ. ಈ ಯೋಜನೆಗಳ ಪ್ರಮುಖ ಉದ್ದೇಶವು ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ಸಿದ್ಧಪಡಿಸುವ ಹಂತದಲ್ಲಿಯೇ ಸರ್ವೆ ನಂಬರಿನಲ್ಲಿ ಹಿತಾಸಕ್ತಿಯುಳ್ಳವರೆಲ್ಲರಿಗೂ ಮುಂಚಿತವಾಗಿ ನೋಟೀಸ್ ಜಾರಿ ಮಾಡಿ, ಎಲ್ಲರ ಸಮಕ್ಷಮ ಅಳತೆ ಮಾಡಿ, ಎಲ್ಲಾ ಹಕ್ಕುದಾರರಿಗೂ ಪ್ರತ್ಯೇಕ ಗಡಿ ನಿರ್ಧರಿಸಿ ಹಕ್ಕು ದಾಖಲೆಗಳನ್ನು ತಯಾರಿಸಿ ನಕ್ಷೆಗಳನ್ನು ವಿತರಿಸುವುದಾಗಿದೆ. ಆದ್ದರಿಂದ, ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಎಲ್ಲಾ ಆರ್.ಟಿ.ಸಿ. ದಾರರಿಗೆ ನೋಟೀಸ್ ಜಾರಿ ಮಾಡುವುದು ಮುಖ್ಯ ಕೆಲಸವಾಗಿದೆ.
ನೋಟೀಸ್ ಜಾರಿ ಮಾಡುವ ಸಮಯದಲ್ಲಿ ಅನುಸರಿಸಬೇಕಾದ ವಿಧಾನ :-
1) ಆರ್ .ಟಿ.ಸಿ.ಯ ಕಾಲಂ ನಂ 9 ರಲ್ಲಿ ನಮೂದಾಗಿರುವ ಎಲ್ಲಾ ಹಕ್ಕುದಾರರಿಗೂ ಅವರ ಹಕ್ಕುಗಳಿಗೆ ಅನುಸಾರವಾಗಿ ಅಳತೆ ಮಾಡಬೇಕಾಗಿದ್ದು, ಎಲ್ಲರಿಗೂ ನೋಟೀಸ್ ಜಾರಿ ಮಾಡುವುದು.
2) ಎಲ್ಲಾ ಆರ್.ಟಿ.ಸಿ. ದಾರರ ವಿಳಾಸ ವಿವರಗಳನ್ನು 11 ಇ ನಕ್ಷೆ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರಿಂದ ಸಾಧ್ಯವಾದಷ್ಟು ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ಪಡೆಯುವುದು.
3) ಆರ್ಲ.ಟಿ.ಸಿ. ದಾರರು ಗ್ರಾಮದಲ್ಲಿಯೇ ವಾಸವಾಗಿದ್ದಲ್ಲಿ ಖುದ್ದಾಗಿ ನೋಟೀಸ್ ಜಾರಿ ಮಾಡುವುದು. ನೋಟೀಸ್ ಜಾರಿ ಮಾಡಿದ ವಿಧಾನದ ಬಗ್ಗೆ ಮಹಜರ್‌ನಲ್ಲಿ ವಿವರವಾಗಿ ದಾಖಲೆ ಮಾಡುವುದು. ಆರ್.ಟಿ.ಸಿ.ದಾರರು ಬೇರೆ ಸ್ಥಳದಲ್ಲಿ ವಾಸವಾಗಿದ್ದಲ್ಲಿ ಅಂಚೆಯ ಮೂಲಕ (ಸಿ.ಓ.ಪಿ) ಅಳತೆ ದಿನಾಂಕವನ್ನು ತಪ್ಪದೇ ತಿಳಿಯಪಡಿಸುವುದು.
4) ಎಲ್ಲಾ ಆರ್.ಟಿ.ಸಿ.ದಾರರು ಅಳತೆ ವೇಳೆಯಲ್ಲಿ ಹಾಜರಿರುವಂತೆ ಅವಶ್ಯವಾದ ಎಲ್ಲಾ ಕ್ರಮ ಜರುಗಿಸುವುದು. ಕೈಗೊಂಡ ಕ್ರಮಗಳ ಬಗ್ಗೆ ಮಹಜರ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವುದು. ನೋಟೀಸ್ ಜಾರಿ ಮಾಡಲಾಗಿಯೂ ಆರ್ಲ.ಟಿ.ಸಿ.ದಾರರ ಪೈಕಿ ಯಾರಾದರೂ ಅಳತೆ ವೇಳೆಯಲ್ಲಿ ಗೈರುಹಾಜರಾಗಿದ್ದರೂ ಸಹ ಅಳತೆ ಕೆಲಸ ಮುಂದುವರೆಸುವುದು. ಎಲ್ಲಾ ಆರ್.ಟಿ.ಸಿ.ದಾರರು ಹಾಜರಿಲ್ಲವೆಂದು ಅಳತೆ ನಿಲ್ಲಿಸುವ ಅಗತ್ಯವಿಲ್ಲ. ಅಳತೆ ಮಾಡುವ ಸಮಯದಲ್ಲಿ ಹಾಜರಾಗುವ ಹಕ್ಕುದಾರರು ಅಥವಾ ಗ್ರಾಮಸ್ಥರ ಸಮ್ಮುಖದಲ್ಲಿ ಅಳತೆ ಮಾಡಿ ಮಹಜರ್‌ನಲ್ಲಿ ನೋಟೀಸ್ ಪಡೆದು ಹಾಜರಾದವರ, ಹಾಜರಾಗದವರ, ನೋಟೀಸು ಪಡೆಯದ ಗೈರು ಹಾಜರಾದವರ ಬಗ್ಗೆ ನಮೂದಿಸುವುದು.
5) ಅಳತೆ ಸಮಯದಲ್ಲಿ ಆರ್.ಟಿ.ಸಿ. ಯ ಎಲ್ಲಾ ಹಕ್ಕುದಾರರ ಪೈಕಿ ಒಬ್ಬರ ಕೋರಿಕೆ ಇದ್ದರೂ ಸಹ ಆರ್ರ.ಟಿ.ಸಿ.ದಾರರು ಹಾಜರಿದ್ದು, ತಮ್ಮ ಅನುಭವ ತೋರಿಸಿ ತಂಟೆತಕರಾರು ಇಲ್ಲದಿದ್ದಲ್ಲಿ ಅವರ ಹಕ್ಕಿನ ವಿಸ್ತೀರ್ಣಕ್ಕೂ ಹಿಸ್ಸೆ ವಿಂಗಡಿಸಿ, ಅಳತೆ ದಾಖಲಿಸಿ ಬ್ಲಾಕ್ ನಂಬರ್ ನೀಡುವುದು.
6) ಸರ್ವೆ ನಂಬರಿನ ಬಾಜು ಸರ್ವೆ ನಂಬರುಗಳ ಹಿಡುವಳಿದಾರರಿಗೆ ನೋಟೀಸು ಜಾರಿ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಅವರ ಆಕ್ಷೇಪಣೆಗಳನ್ನು 11 ಇ ನಕ್ಷೆ ತಯಾರಿಸುವ ಸಮಯದಲ್ಲಿ ಪರಿಗಣಿಸುವ ಅವಶ್ಯಕತೆ ಇರುವುದಿಲ್ಲ.
ಈ ಕ್ರಮಗಳನ್ನು ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ತಯಾರಿಸುವಾಗ ಕಡ್ಡಾಯವಾಗಿ ಅನುಸರಿಸಲು ಎಲ್ಲಾ ಪರವಾನಗಿ ಭೂಮಾಪಕರಿಗೆ ಸೂಚನೆ ನೀಡುವುದು ತಹಶೀಲ್ದಾರ್ ಮತ್ತು ಪರ್ಯಾವೇಕ್ಷಕರ ಜವಾಬ್ದಾರಿಯಾಗಿರುತ್ತದೆ ಹಾಗೂ ಭೂದಾಖಲೆಗಳ ಉಪ ನಿರ್ದೇಶಕರು ನೋಟೀಸ್ ಜಾರಿ ಪ್ರಕ್ರಿಯೆಯಲ್ಲಿ ಮೇಲೆ ತಿಳಿಸಿರುವ ಕ್ರಮಗಳನ್ನು ಅನುಸರಿಸುತ್ತಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವುದು.









