ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ (ಪಿಎಂಜೆಜೆವೈ), ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಗಳಡಿ (ಪಿಎಂಎಸ್‍ಬಿವೈ) ಜಿಲ್ಲೆಯಲ್ಲಿ ಹೆಚ್ಚಿನ ನಾಗರೀಕರು ನೋಂದಣಿಗೆ ಕ್ರಮವಹಿಸಬೇಕು ಎಂದು ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ನೋಂದಣಿ ಮತ್ತು ಇಲಾಖೆಗಳಲ್ಲಿ ಕ್ಲೇಮ್ ಮಾಡದೆ ಇರುವ ಖಾತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ 18 ರಿಂದ 50 ವಯಸ್ಸಿನವರೆಗಿನ ನಾಗರೀಕರು ರೂ.436/-ಗಳ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 18 ರಿಂದ 70 ವಯಸ್ಸಿನವರೆಗಿನ ನಾಗರೀಕರು ರೂ.20/- ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಯಾವುದೇ ರೀತಿಯ ಮರಣ ಸಂಭವಿಸಿದರೂ ಅವರ ವಾರಸುದಾರಿಗೆ ಪ್ರತಿ ಯೋಜನೆಯಡಿ ರೂ.2 ಲಕ್ಷದವರೆಗೆ ವಿಮೆ ಸೌಲಭ್ಯ ದೊರೆಯಲಿದೆ. ಹಾಗಾಗಿ ಜಿಲ್ಲೆಯ ಎಲ್ಲ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ಜಿಲ್ಲೆಯ ಪ್ರತಿಯೊಬ್ಬ ಅರ್ಹ ನಾಗರೀಕರು ಎರಡು ಯೋಜನೆಗಳಲ್ಲಿ ನೋಂದಣಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ನೀಡಬೇಕು ಎಂದು ತಾಕೀತು ಮಾಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಬಾಬು ಮಾತನಾಡಿ, ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ 18 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಪಿಎಂಜೆಜೆಬಿವೈ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಯಡಿ ವಾರ್ಷಿಕ ರೂ.436 ಪ್ರೀಮಿಯಂನಲ್ಲಿ ರೂ.2 ಲಕ್ಷದ ಲೈಫ್ ಇನ್ಶೂರೆನ್ಸ್ ಕವರೇಜ್ ಪಡೆಯಬಹುದಾಗಿದೆ. ಈ ಯೋಜನೆಗೆ ನಾಮಿನಿ ಕಡ್ಡಾಯವಾಗಿದ್ದು, ನಾಮಿನಿಯ ಜನ್ಮ ದಿನಾಂಕ ಅತ್ಯವಶ್ಯಕವಾಗಿ ಬೇಕು. 55 ವರ್ಷದ ಒಳಗೆ ಯಾವುದೇ ಮರಣ ಸಂಭವಿಸಿದರೂ ಸಂಬಂಧಪಟ್ಟವರಿಗೆ ವಿಮೆ ಸೌಲಭ್ಯ ದೊರೆಯಲಿದೆ ಎಂದರು.
ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯು ಅಪಘಾತ ವಿಮೆಯಾಗಿದ್ದು, 18 ರಿಂದ 70 ವಯಸ್ಸಿನವರೆಗಿನ ನಾಗರೀಕರು ರೂ.20/- ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಈ ಯೋಜನೆಯಡಿಯೂ ರೂ.2 ಲಕ್ಷದ ವಿಮಾ ಸೌಲಭ್ಯ ದೊರೆಯಲಿದೆ ಎಂದರು.