ಮಡಿಕೇರಿ: ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2024-25 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಪಡೆಯುವ ಅವಧಿಯಲ್ಲಿ ಶಿಷ್ಯವೇತನ ಪಾವತಿಸುವ ಸಲುವಾಗಿ ಜುಲೈ.31 ರವರೆಗೆ ಇಲಾಖಾ ವೆಬ್‍ಸ್ಯಟ್ www.sw.kar.nic.in ಹಾಗೂ www.tw.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಕೊಡಗು ಜಿಲ್ಲೆಯವರಾಗಿರಬೇಕು. 40 ವರ್ಷ ವಯೋಮಿತಿಯೊಳಗಿರಬೇಕು. ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು 3 ಅಥವಾ 5 ವರ್ಷಗಳ ಒಳಗಡೆ ಕಾನೂನು ಪದವಿ ಪಡೆದಿರಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪ್ರಾಸಿಕ್ಯೂಟ್ ಬಳಿ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋಗಬಾರದು. ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದಲ್ಲಿ ಮಾತ್ರ ನಿಯಮಾನುಸಾರ ಸಡಿಲಗೊಳಿಸಲಾಗುವುದು. ಒಂದು ವೇಳೆ ತರಬೇತಿ ಬಿಟ್ಟು ಹೋದಲ್ಲಿ ಅಂತವರ ಶಿಷ್ಯ ವೇತನವನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು.
ತರಬೇತಿ ಅವಧಿಯು 2 ವರ್ಷಗಳಾಗಿದ್ದು, ಮಾಸಿಕ ರೂ.10 ಸಾವಿರಗಳಿಗೆ ಶಿಷ್ಯವೇತನವನ್ನು ನೀಡಲಾಗುವುದು. ಕುಟುಂಬದ ವಾರ್ಷಿಕ ವರಮಾನ 2.50 ಲಕ್ಷ ಮೀರತಕ್ಕದ್ದಲ್ಲ. ಸುಳ್ಳು ಮಾಹಿತಿ ದಾಖಲಾತಿಗಳನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿ ಪಡಿಸಲಾಗುವುದು. ಅಂತರ್ಹ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ನೀಡಿದ ಶಿಷ್ಯವೇತನವನ್ನು ಶೇ.10ರ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು.
ಅರ್ಜಿಯಲ್ಲಿ ಪೂರ್ಣ ಮಾಹಿತಿ ಇಲ್ಲದಿದ್ದ ಪಕ್ಷದಲ್ಲಿ ಅರ್ಜಿ ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯು ಕಾನೂನು ಪದವಿಯಲ್ಲಿ ತೇರ್ಗಡೆ ಹೊಂದಿದ 3 ವರ್ಷದೊಳಗೆ ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೋಂದಾಯಿಸಿದ ನಂತರ ಶಿಷ್ಯವೇತನ ಮತ್ತು ಎನ್‍ರೋಲ್‍ಮೆಂಟ್ ಫೀಯನ್ನು ನೀಡಬೇಕು. ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ್ದಲ್ಲಿ ಮತ್ತು ತರಬೇತಿಗೆ ಮಾಹಿತಿ ನೀಡದೆ ಗೈರು ಹಾಜರಾಗಿದ್ದಲ್ಲಿ ಶಿಷ್ಯವೇತನವನ್ನು ತಡೆಯಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಕಾನೂನು ಪದವೀಧರ ತರಬೇತಿಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಗರ್ಭಿಣಿ ಸ್ಥಿತಿಯಲ್ಲಿರುವ ವೇಳೆ ಮಹಿಳಾ ಅಭ್ಯರ್ಥಿಗಲಿಗೆ 135 ದಿನಗಳ ತರಬೇತಿ ಭತ್ಯೆ ರಹಿತ ರಜೆಯನ್ನು (2 ವರ್ಷಗಳ ತರಬೇತಿಗೆ 1 ಬಾರಿ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಪಡೆದು ರಜೆ ಮಂಜೂರುಗೊಳಿಸಿ ತರಬೇತಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್‍ಸೈಟ್ www.sw.kar.nic.in(ಪರಿಶಿಷ್ಟ ಜಾತಿ) ಹಾಗೂ www.tw.kar.nic.in (ಪರಿಶಿಷ್ಟ ಪಂಗಡ) ನಲ್ಲಿ ಜುಲೈ, 31 ರವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಇಲ್ಲಿನ ಕಚೇರಿ ದೂ.ಸಂ.9480843155 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ವಿದ್ಯಾರ್ಥಿಗಳೇ ಗಮನಿಸಿ: ಜುಲೈ.13, 14ರಂದು ನಿಗದಿ ಪಡಿಸಿದ್ದ ‘PG CET-2024ರ ಪರೀಕ್ಷೆ’ ಮುಂದೂಡಿಕೆ