ಬಳ್ಳಾರಿ: ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದ್ದು, ಈ ಬಗ್ಗೆ ಮೇ 09 ರಂದು ಅಧಿಸೂಚನೆ ಪ್ರಕಟವಾಗಲಿದೆ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆ ಸಂಬಂಧ ಮೇ 9 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಮೇ.17 ರಂದು ನಾಮ ಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಮೇ. 20 ಕೊನೆಯ ದಿನವಾಗಿದೆ. ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ಜರುಗಲಿದೆ. ಜೂನ್ 6 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಜೂನ್ 12 ರಂದು ಚುನಾವಣೆ ಪ್ರಕ್ರಿಯಗಳು ಪೂರ್ಣಗೊಳ್ಳಲಿವೆ. ಈ ಚುನಾವಣೆ ಸಂಬಂಧ ಈಗಾಗಲೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಈಶಾನ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಆಯ್ಕೆಯಾಗಿ ನಡೆಯುವ ಈ ಚುನಾವಣೆಗೆ ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾಗಿದ್ದು, ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿ ಆಗಿರುತ್ತಾರೆ ಎಂದರು.
*22,156 ಮತದಾರರು, 16 ಮತಗಟ್ಟೆಗಳು:*
ಚುನಾವಣಾ ಆಯೋಗದ ನಿರ್ದೇಶನದಂತೆ, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಕಳೆದ 2023 ಡಿಸೆಂಬರ್ 30 ರಂದು ಈಗಾಗಲೇ ಪ್ರಕಟಿಸಲಾಗಿದೆ. ಅಂತಿಮ ಮತದಾರ ಪಟ್ಟಿಯಂತೆ ಬಳ್ಳಾರಿ ಜಿಲ್ಲೆಯಲ್ಲಿ 13,744 ಪುರುಷರು, 8,408 ಮಹಿಳೆಯರು, ಇತರೆ-04 ಸೇರಿದಂತೆ ಒಟ್ಟು 22,156 ಪದವೀಧರ ಮತದಾರರಿದ್ದು, ಒಟ್ಟು 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕಂಪ್ಲಿ ತಾಲ್ಲೂಕಿನಲ್ಲಿ 3,539 ಮತದಾರರು, 03 ಮತಗಟ್ಟೆಗಳು. ಸಿರುಗುಪ್ಪ-3,323 ಮತದಾರರು, 04 ಮತಗಟ್ಟೆಗಳು. ಬಳ್ಳಾರಿ (ಗ್ರಾಮೀಣ)-4,604 ಮತದಾರರು, 03 ಮತಗಟ್ಟೆಗಳು. ಬಳ್ಳಾರಿ (ನಗರ)-7,396 ಮತದಾರರು, 03 ಮತಗಟ್ಟೆಗಳು ಹಾಗೂ ಸಂಡೂರು ತಾಲ್ಲೂಕಿನಲ್ಲಿ 3,294 ಮತದಾರರಿದ್ದು, 03 ಮತಗಟ್ಟೆಗಳಿವೆ. ಮತದಾರರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಈಗಾಗಲೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
*ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮೇ 6 ಕಡೆಯ ದಿನ:*
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಲು ಮೇ 06 ಅಂತಿಮ ದಿನವಾಗಿದೆ. ಅರ್ಹ ಪದವೀಧರ ಮತದಾರರು ಹೆಸರು ಸೇರ್ಪಡೆಗೆ ಅರ್ಜಿಗಳನ್ನು ಆಯಾ ತಾಲ್ಲೂಕು ತಹಸಿಲ್ದಾರರ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಅದೇ ತಹಸಿಲ್ದಾರರ ಕಚೇರಿಗೆ ಸಲ್ಲಿಸಬಹುದು. ಜನವರಿ ತಿಂಗಳಿನಿಂದ ನಿರಂತರ ಪರಿಷ್ಕರಣೆಯಲ್ಲಿ ಸ್ವೀಕೃತವಾದ ಅರ್ಜಿಗಳು ಹಾಗೂ ಮೇ 06 ರವರೆಗೆ ಸ್ವೀಕರಿಸಲ್ಪಟ್ಟ ಅರ್ಜಿಗಳನ್ನು ನಿಯಮಾನುಸಾರ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಉಪಸ್ಥಿತರಿದ್ದರು.