ಬಳ್ಳಾರಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ತಯಾರಿಸುವ ಮತ್ತು ಮಾರಾಟ ಮಾಡಲ್ಪಡುವ ಆಹಾರ ಪದಾರ್ಥಗಳ ಗುಣಮಟ್ಟದ ಮೇಲೆ ತೀವ್ರ ನಿಗಾ ಇಡುವ ಕೆಲಸ ಮಾಡುತ್ತಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ. ಕೃತಕ ಬಣ್ಣ ಬಳಸಿ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿಗಳನ್ನು ಉಪಯೋಗಿಸಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ಗುಂಡೂರಾವ್ ತಿಳಿಸಿದರು.
ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 122 ರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕಳೆದ ಮೂರು ತಿಂಗಳುಗಳಲ್ಲಿ ಇಲಾಖೆಯ ವತಿಯಿಂದ ಹಲವಾರು ಆಹಾರ ಪದಾರ್ಥಗಳ ವಿಶ್ಲೇಷಣೆಗೆ ರಾಜ್ಯಾದ್ಯಂತ ವಿಶೇಷ ಆಂದೋಲಗಳನ್ನು ಕೈಗೊಂಡಿದೆ. ರಾಜ್ಯಾದ್ಯಂತ ಕಳೆದ ಮೂರು ತಿಂಗಳುಗಳಲ್ಲಿ 652 ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಹಾಗೂ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್‍ಗಳನ್ನು ಪರಿಶೀಲಿಸಿ ಅಲ್ಲಿನ 504 ಆಹಾರ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಿದ್ದು, ಅವುಗಳಲ್ಲಿ 9 ಮಾದರಿಗಳು ಅಸುರಕ್ಷಿತವಾಗಿದ್ದು, 3 ಮಾದರಿಗಳು ಕಳಪೆ ಗುಣಮಟ್ಟದ್ದಾಗಿರುತ್ತದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಕಳೆದ ಮೂರು ತಿಂಗಳುಗಳಲ್ಲಿ 613 ಅಂಗನವಾಡಿಗಳನ್ನು ಪರಿಶೀಲಿಸಿ ಅಲ್ಲಿನ 232 ಆಹಾರ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಿದ್ದು, ಅವುಗಳಲ್ಲಿ 3 ಮಾದರಿಗಳು ಅಸುರಕ್ಷಿತವಾಗಿದ್ದು, 2 ಮಾದರಿಗಳು ಕಳಪೆ ಗುಣಮಟ್ಟದ್ದಾಗಿರುತ್ತದೆ.
ರಾಜ್ಯಾದ್ಯಂತ FSSAI ಪ್ರಮಾಣಿತ FoSTaC (ಆಹಾರ ಉದ್ದಿಮೆದಾರರಿಗೆ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಶುಚಿತ್ವ ಮತ್ತು ಗುಣಮಟ್ಟಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀಡಲಾದ ತರಬೇತಿ) ತರಬೇತಿಯನ್ನು 58 ತಂಡಗಳಲ್ಲಿ 3047 ಉದ್ದಿಮೆದಾರರು ಪಡೆದುಕೊಂಡಿರುತ್ತಾರೆ.
ರಾಜ್ಯಾದ್ಯಂತ 56 ಹಾಲಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಗುಣವಿಶ್ಲೇಷಣೆಗೊಳಪಡಿಸಿದ್ದು, ಎಲ್ಲಾ ಮಾದರಿಗಳೂ ಸಹ ಸುರಕ್ಷಿತ ಎಂದು ವರದಿಯಾಗಿರುತ್ತವೆ.
ರಾಜ್ಯಾದ್ಯಂತ 235 ಕುಡಿಯುವ ನೀರಿನ ಬಾಟಲ್‍ಗಳ ತಯಾರಿಕಾ ಘಟಕಗಳನ್ನು ಪರಿಶೀಲಿಸಿ 25 ಕುಡಿಯುವ ನೀರಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಗುಣವಿಶ್ಲೇಷಣೆಗೊಳಪಡಿಸಿದ್ದು, ಅವುಗಳಲ್ಲಿ 2 ಮಾದರಿಗಳು ಅಸುರಕ್ಷಿತ/ಕಳಪೆ ಎಂದು ವರದಿಯಾಗಿರುತ್ತವೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ 20 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುತ್ತವೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ 34 ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ 24 ಪ್ರಕರಣಗಳು ಇತ್ಯರ್ಥವಾಗಿದ್ದು, ಸದರಿ ಪ್ರಕರಣಗಳಲ್ಲಿ ರೂ.4,77,000/-ಗಳನ್ನು ದಂಡವಾಗಿ ವಿಧಿಸಲಾಗಿರುತ್ತದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು 5384 ಆಹಾರ ಉದ್ದಿಮೆಗಳಿಗೆ ಪರಿಶೀಲನಾ ಭೇಟಿ ನೀಡಿ ದಂಡ ವಿಧಿಸಬಹುದಾದ 184 ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ.6,71,300/-ಗಳನ್ನು ದಂಡವಾಗಿ ವಿಧಿಸಿರುತ್ತಾರೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ ಕೂಡಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ವರದಿಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ.
ಗೋಬಿ ಮಂಚೂರಿ 171 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 107 ಕೃತಕ ಬಣ್ಣಗಳು (ಟಾರ್ ಟ್ರಾಸೈನ್, ಸನ್‍ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್) ಕಂಡುಬಂದ ಅಸುರಕ್ಷಿತ ಮಾದರಿಗಲಾಗಿವೆ. 64 ಕೃತಕ ಬಣ್ಣಗಳಿಲ್ಲದೆ ಇರುವ ಸುರಕ್ಷಿತ ಮಾದರಿಗಳಾಗಿವೆ.
ಕಾಟನ್‍ಕ್ಯಾಂಡಿಗಳ 25 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 15 ಕೃತಕ ಬಣ್ಣ (ಟಾರ್‍ಟ್ರಾಸೈನ್, ಸನ್‍ಸೆಟ್ ಯೆಲ್ಲೋ ಮತ್ತು ರೋಡಮೈನ್-ಬಿ) ಕಂಡುಬಂದ ಅಸುರಕ್ಷಿತ ಮಾದರಿಗಳು, 10 ಕೃತಕ ಬಣ್ಣಗಳಿಲ್ಲದೆ ಇರುವ ಸುರಕ್ಷಿತ ಮಾದರಿಗಳಾಗಿವೆ ಎಂದು ತಿಳಿಸಿದರು.
ಕೃತಕ ಬಣ್ಣಗಳು ಕಂಡುಬಂದ ಮಾದರಿಗಳು The Food Safety and Standards Act, 2006 ನಿಯಮ 3(1)ರನ್ವಯ ಅಸುರಕ್ಷಿತವಾಗಿರುತ್ತವೆ. The Food Safety and Standards (Food Products Standards and Food Additives) Regulations, 2011 ರ ನಿಯಮ 16.0 ರನ್ವಯ ಗೋಬಿ ಮಂಚೂರಿ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿಲ್ಲ.
The Food Safety and Standards (Food Products Standards and Food Additives) Regulations, 2011 ರ ನಿಯಮಗಳನ್ವಯ ಕಾಟನ್ ಕ್ಯಾಂಡಿಗಳಲ್ಲಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣಗಳನ್ನು ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿಲ್ಲ್ಲ.ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಬರ್ಂಧಿಸಿ ಆಹಾರ ಸುರಕ್ಷತಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುತ್ತಾರೆ.
ಇದೇ ರೀತಿ ಕಾಟನ್ ಕ್ಯಾಂಡಿಯ ತಯಾರಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣಗಳನ್ನು ಬಳಸುವುದನ್ನು ಮತ್ತು ರೋಡಮೈನ್-ಬಿ ಸೇರಿದಂತೆ ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಬರ್ಂಧಿಸಿ ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಆದೇಶಿಸಿರುತ್ತಾರೆ.
ಯಾವುದೇ ರೀತಿಯ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು.
ಕೃತಕ ಬಣ್ಣಗಳನ್ನು ಬಳಸಿರುವ ತಿಂಡಿ ತಿನಿಸುಗಳನ್ನು ದೀರ್ಘಕಾಲ ಬಳಸುವುದರಿಂದ ಚಿಕ್ಕಮಕ್ಕಳೂ ಸೇರಿದಂತೆ ಬಳಕೆದಾರರಿಗೆ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಕೃತಕ ಬಣ್ಣಗಳನ್ನು ಬಳಸಿ ತಯಾರಿಸಲಾಗಿರುವ ತಿಂಡಿ-ತಿನಿಸುಗಳನ್ನು ಉಪಯೋಗಿಸಬಾರದು ಎಂದು ತಿಳಿಸಿದರು.