ಬೆಂಗಳೂರು : ರಾಜ್ಯದಲ್ಲಿ ಯಾವುದೇ ಅನರ್ಹ ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಲ್ಲ, ಎಲ್ಲವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಬಿಪಿಎಲ್ನಲ್ಲಿರುವ ಅನರ್ಹರನ್ನು ನಿಯಮಗಳ ಪ್ರಕಾರ ಪರಿಷ್ಕರಣೆ ಮಾಡಿ, ಎಪಿಎಲ್ಗೆ ವರ್ಗಾವಣೆ ಮಾಡುತ್ತೇವೆ. ಯಾವ ಕಾರ್ಡನ್ನು ರದ್ದು ಮಾಡಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಎಲ್ಲಾ ಕಾರ್ಡ್ಗಳನ್ನು ಪರಿಷ್ಕರಣೆ ಮಾಡುತ್ತೇವೆ. ವರ್ಗಾವಣೆ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯೊಳಗೆ ಅದನ್ನು ಸರಿಪಡಿಸಿ ಆಹಾರ ಧಾನ್ಯ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಿಪಿಎಲ್ ಕಾರ್ಡ್ ಪರಿಷ್ಕರಣಿ ನಡೆಸಲಾಗುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಯಾವ ಕಾರ್ಡನ್ನೂ ರದ್ದು ಮಾಡುವುದಿಲ್ಲ. ಅನರ್ಹರ ಕಾರ್ಡ್ ಗಳನ್ನು ಪರಿಷ್ಕರಿಸಿ ಎಪಿಎಲ್ ಗೆ ಸೇರ್ಪಡೆ ಮಾಡಲಾಗುವುದು, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಶೇಕಡ 70ರಿಂದ 75ರಷ್ಟು ಬಿಪಿಎಲ್ ಕಾರ್ಡ್ ಗಳು ಇದ್ದು, ಬರೋಬ್ಬರಿ 1.17 ಕೋಟಿ ಅಧಿಕ ಬಿಪಿಎಲ್ ಕಾರ್ಡ್ ಗಳು ಇವೆ. ಹೀಗಾಗಿ ಪರಿಷ್ಕರಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದರು.
ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ನೀಡಿರುವ ನಿಯಮಾವಳಿಗಳ ಪ್ರಕಾರ 7 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ತೆಗೆಯಬೇಕೆಂದು ಸೂಚಿಸಿದೆ. ಕೇಂದ್ರದ ಸರ್ಕಾರದ ಪರಿಷ್ಕರಣೆಯ ಪ್ರಕಾರ ಏನು ಮಾಡಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.