ಟೆಹ್ರಾನ್:ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಇರಾನ್ನ ತೈಲ ಸಾಗಣೆಯನ್ನು ತಡೆಯಲು ಅಮೆರಿಕವು ನೌಕಾ ದಿಗ್ಬಂಧನ (Naval Blockade) ವಿಧಿಸಲು ಮುಂದಾಗಿರುವ ಬೆನ್ನಲ್ಲೇ, ಇರಾನ್ ಕೆಂಡಾಮಂಡಲವಾಗಿದೆ. “ನಮ್ಮನ್ನು ತಡೆಯಲು ಪ್ರಯತ್ನಿಸಿದರೆ, ಈ ಭಾಗದ ಯಾವುದೇ ಬಂದರುಗಳು ಸುರಕ್ಷಿತವಾಗಿ ಉಳಿಯುವುದಿಲ್ಲ” ಎಂದು ಇರಾನ್ ಸೇನಾ ಮುಖ್ಯಸ್ಥರು ಬಹಿರಂಗವಾಗಿಯೇ ಎಚ್ಚರಿಸಿದ್ದಾರೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಮಾತನಾಡಿ, “ಅಮೆರಿಕವು ಅಂತರಾಷ್ಟ್ರೀಯ ಜಲಮಾರ್ಗದಲ್ಲಿ ದೌರ್ಜನ್ಯ ಎಸಗಲು ಮುಂದಾಗಿದೆ. ಒಂದು ವೇಳೆ ನಮ್ಮ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ, ನಾವು ಕೇವಲ ಅಮೆರಿಕದ ನೌಕೆಗಳನ್ನಷ್ಟೇ ಅಲ್ಲ, ಅವರಿಗೆ ಸಹಕರಿಸುವ ಈ ವಲಯದ ಎಲ್ಲಾ ದೇಶಗಳ ಬಂದರುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತೇವೆ” ಎಂದು ಗುಡುಗಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿ ಹಡಗಿನ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಅಮೆರಿಕದ ಈ ದಿಗ್ಬಂಧನ ಯೋಜನೆಯು ಪಶ್ಚಿಮ ಏಷ್ಯಾದಲ್ಲಿ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಬಹುದು ಎಂದು ರಾಜತಾಂತ್ರಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಎಚ್ಚರಿಕೆಯ ಬೆನ್ನಲ್ಲೇ ಇರಾನ್ ತನ್ನ ಕರಾವಳಿ ತೀರದಲ್ಲಿ ಅತ್ಯಾಧುನಿಕ ‘ನೌಕಾ ವಿಧ್ವಂಸಕ’ ಕ್ಷಿಪಣಿಗಳನ್ನು (Anti-ship Missiles) ನಿಯೋಜಿಸಿದೆ. ಅಮೆರಿಕದ ಯಾವುದೇ ನೌಕಾ ವ್ಯೂಹವನ್ನು ಎದುರಿಸಲು ತಾವು ಸಿದ್ಧರಾಗಿರುವುದಾಗಿ ಇರಾನ್ ಘೋಷಿಸಿದೆ.







