ಬೆಂಗಳೂರು: ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡವೊಂದರ ಗೋಡೆ ಕುಸಿತಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂಬುದಾಗಿ ಕನ್ನಡ ನ್ಯೂಸ್ ನೌನಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಆದರೇ ಶಿವಮೊಗ್ಗ ಜಿಲ್ಲೆಯ ಸಿದ್ಲೀಪುರದಲ್ಲಿ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಶ್ರಮಿಕ ವಸತಿ ಸಮುಚ್ಛಯವಿರುವುದು ಸರಿಯಷ್ಟೇ. ಆದರೇ ಶ್ರಮಿಕ ವಸತಿ ಸಮುಚ್ಛಯದ ಯಾವುದೇ ಗೋಡೆ ಕುಸಿದಿರುವುದಿಲ್ಲ. ಪ್ರಸ್ತುತ ಮಂಡಳಿಯಿಂದ ಸದರಿ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿರುವುದಿಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌಗೆ ಪತ್ರ ಬರೆದಿರುವಂತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿಗಳು ಶ್ರಮಿಕ ವಸತಿ ಸಮುಚ್ಛಯದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ಗುತ್ತಿಗೆದಾರರು ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿದ್ದು, ಸದರಿ ಸಮುಚ್ಛಯದ ಕಾಮಗಾರಿ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸುವ ಸಮಯದಲ್ಲಿ ಈ ಘಟನೆಯು ನಡೆದಿರುವುದಾಗಿ ತಿಳಿದು ಬಂದಿದೆ ಎಂದಿದ್ದಾರೆ.
ಇನ್ನೂ ನಿಮ್ಮ ಕನ್ನಡ ನ್ಯೂಸ್ ನೌ ವೆಬ್ ಸೈಟ್ ನಲ್ಲಿ ಪ್ರಕಟವಾದಂತೆ ಇಲಾಖೆಯ ವಸತಿ ಸಮುಚ್ಛಯದ ಕಟ್ಟಡ ಹಾಗೂ ಆವರಣದ ಗೋಡೆಗೆ ಯಾವುದೇ ಹಾನಿಯಾಗಿರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.








