ಕನಕಪುರ: ಡಿ.ಕೆ. ಶಿವಕುಮಾರ್ ಅವರನ್ನು ಏನಾದರೂ ಮಾಡಿ ಕಟ್ಟಿಹಾಕಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದೆ. ನಿಮ್ಮ ಆಶೀರ್ವಾದ ಇರುವವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ. ಕೆಲವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಮನಗರ ಜಿಲ್ಲೆ ನೆನಪಾಗುತ್ತದೆ. ರಾಮನಗರ ಜಿಲ್ಲೆಗೆ ನೆಂಟರಂತೆ ಬಂದು ಹೋಗುತ್ತಾರೆ. ನಿಮ್ಮ ಕಷ್ಟ ಸುಖಕ್ಕೆ ಯಾರೂ ಬುರುವುದಿಲ್ಲ. ನಿಮ್ಮ ಕಷ್ಟ ಸುಖಕ್ಕೆ ಹೆಗಲುಕೊಟ್ಟು ಯಾರಾದರೂ ನಿಂತಿದ್ದರೆ ಅದು ನಾನು ಮತ್ತು ಡಿ.ಕೆ. ಶಿವಕುಮಾರ್ ಮಾತ್ರ ಎಂಬುದಾಗಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಕನಕಪುರದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಈ ತಾಲೂಕಿನ ಮಗನಾಗಿ, ನಿಮ್ಮ ಸಹೋದರ, ಸ್ನೇಹಿತನಾಗಿ ತಾಲೂಕಿನ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುತ್ತಿದ್ದೇನೆ. ಪಕ್ಷಭೇದ ಮರೆತು ಕೆಲಸ ಮಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ ಎಂದರು.
ಕನಕಪುರದಲ್ಲಿ ದೊಡ್ಡ ಅನ್ಯಾಯ ನಡೆಯುತ್ತಿದೆ, ಉಸಿರುಗಟ್ಟುವ ವಾತಾವರಣ ನಿರ್ಮಿಸಿದ್ದೇವೆ ಎಂಬ ರೀತಿಯಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಕನಕಪುರವನ್ನು ಯಾವ ರೀತಿ ಕೆಟ್ಟ ಬಿಂಬಿಸುತ್ತಿದ್ದಾರೆ ಇಲ್ಲಿನ ಜನ ಈ ಬಗ್ಗೆ ಆಲೋಚಿಸಬೇಕು. ಡಿ.ಕೆ. ಶಿವಕುಮಾರ್ ಅವರ ಏಳಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿ ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾರಿಗೆ ಯಾವ ತೊಂದರೆ ನೀಡಿದ್ದೇವೆ ಎಂದು ಇಲ್ಲಿರುವ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹೇಳಬೇಕು.
ರಾಜಕೀಯ ಹಿತಾಸಕ್ತಿಗಾಗಿ ತಾಲೂಕನ್ನು ಕೆಟ್ಟದಾಗಿ ಬಿಂಬಿಸುತ್ತಿರುವುದನ್ನು ನೀವೆಲ್ಲರೂ ಒಕ್ಕೋರಲಿನಿಂದ ಖಂಡಿಸಬೇಕು. ಈ ತಾಲೂಕಿನ ಅಭಿವೃದ್ಧಿಗೆ ನಾವು ಅನೇಕ ಕಾರ್ಯಕ್ರಮ ಕೊಟ್ಟಿದ್ದೇವೆ. ನಮ್ಮ ಮೆಡಿಕಲ್ ಕಾಲೇಜು ಕಿತ್ತುಕೊಂಡು ಹೋದ, ಮೇಕೆದಾಟು ಯೋಜನೆಗೆ ಅನುಮತಿ ನೀಡದ ಬಿಜೆಪಿಯವರು ಇಂದು ಯಾವ ನೈತಿಕತೆಯಿಂದ ನಿಮ್ಮ ಮತ ಕೇಳುತ್ತಿದ್ದಾರೆ. ಈ ತಾಲೂಕಿನ ಅಭಿವೃದ್ಧಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೊಡುಗೆ ಏನು? ಡಿ.ಕೆ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಲಿಷ್ಠವಾಗಿದೆ. ನಿಮ್ಮ ಜತೆ ಇರಲಿದೆ.
ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ನೀಡಿದೆ. ಬಿಜೆಪಿಯವರು ಈ ಯೋಜನೆಗೆ ವಿರುದ್ಧವಾಗಿದ್ದಾರೆ. ನಮ್ಮ ಯೋಜನೆ ಸರಿಯಾಗಿಲ್ಲವಾದರೆ ಅವರ ಕಾರ್ಯಕರ್ತರಿಗೆ ಈ ಯೋಜನೆ ಲಾಭ ಪಡೆಯದಂತೆ ಹೇಳಲಿ. ನಾವು ಗ್ಯಾರಂಟಿ ಕೊಟ್ಟು ಮಹಿಳೆಯರನ್ನು ದಾರಿ ತಪ್ಪಿಸಿದ್ದರೆ ಈ ಗ್ಯಾರಂಟಿ ಪ್ರಯೋಜನ ಪಡೆಯಬೇಡಿ ಎಂದು ಅವರು ಕರೆ ನೀಡಲಿ. ಅವರಿಗೆ ಗ್ಯಾರಂಟಿ ಯೋಜನೆಗಳು ಬಡವರು, ರೈತರಿಗೆ ನೆರವಾಗುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಸಮಯದಲ್ಲಿ ನಾಟಕವಾಡುವವರ ಬಗ್ಗೆ ನೀವು ಎಚ್ಚರದಿಂದ ಇರಿ. ಪ್ರಧಾನಮಂತ್ರಿಗಳು ಉತ್ತರ ಭಾರತದಲ್ಲಿ ಡಿ.ಕೆ. ಸುರೇಶ್ ಸೋಲಿಸಬೇಕು ಎಂದು ಕರೆ ನೀಡುತ್ತಿದ್ದಾರೆ.
ಈ ಭಾಗದಲ್ಲಿ ಮೆಡಿಕಲ್ ಆಸ್ಪತ್ರೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನೀವು ಡಿ.ಕೆ. ಶಿವಕುಮಾರ್ ಅವರಿಗೆ ಶಕ್ತಿ ನೀಡಿ ಬೇರೆ ಪಕ್ಷದ ನಾಯಕರ ಷಡ್ಯಂತ್ರಕ್ಕೆ ಉತ್ತರ ನೀಡಬೇಕು.
ಕೋವಿಡ್ ಸಮಯದಲ್ಲಿ ನಿಮಗೆ ಐಸಿಯು ಬೆಡ್ ಬೇಕಾ? ಔಷಧಿ ಬೇಕಾ? ಲಸಿಕೆ ಬೇಕಾ? ಊಟ ಬೇಕಾ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಯಾವುದಾದರೂ ಒಬ್ಬ ನಾಯಕ ನಿಮ್ಮನ್ನು ಕೇಳಿದ್ದಾರಾ? ನಾನು ನನ್ನ ಜೀವವನ್ನು ಒತ್ತೆ ಇಟ್ಟು ಕಷ್ಟ ಕಾಲದಲ್ಲಿ ಕೆಲಸ ಮಾಡಿದ್ದೇನೆ. ನಾನು ಮಾಡಿರುವ ಕೆಲಸಕ್ಕೆ ನಾನು ಕೂಲಿ ಕೇಳುತ್ತಿದ್ದೇನೆ.
2ನೇ ಕ್ರಮಸಂಖ್ಯೆಯ ಹಸ್ತದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ಹಾಕಿ. ಇಲ್ಲಿ ಕೇವಲ ನಾನು ಮಾತ್ರ ಅಭ್ಯರ್ಥಿಯಲ್ಲ. ಈ ಕ್ಷೇತ್ರದ ಪ್ರತಿಯೊಬ್ಬ ಮತದಾರ ಕೂಡ ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ನೀವು ನಿಮ್ಮ ಮಗನಂತೆ ಸಾಕಿ, ಸಲಹಿದ್ದೀರಿ. ಇನ್ನಷ್ಟು ಪೋಷಣೆ ಮಾಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದರು.
BIG NEWS: ‘ನಾಮಪತ್ರ’ ಹಿಂಪಡೆಯದೇ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ‘ಕೆ.ಎಸ್ ಈಶ್ವರಪ್ಪ’
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ