ಬೆಂಗಳೂರು: ಯಾವುದೇ ಕಾರಣಕ್ಕೂ ಲೋಕಸಭಾ ಕ್ಷೇತ್ರ ವ್ಯಾಪ್ತಿ, ನೆರೆಹೊರೆ ಜಿಲ್ಲೆಗೆ ಅಧಿಕಾರಿಗಳನ್ನು ನಿಯೋಜಿಸುವಂತಿಲ್ಲ ಎಂಬುದಾಗಿ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗವು ಖಡಕ್ ಆದೇಶದಲ್ಲಿ ಸೂಚಿಸಿದೆ.
ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗವು ರಾಜ್ಯಗಳಿಗೆ ಆದೇಶ ಹೊರಡಿಸಿದ್ದು, ಮೂರು ವರ್ಷ ಪೂರೈಸಿದ ನಂತ್ರ ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೇರೆ ಜಿಲ್ಲೆಗೆ ನಿಯೋಜಿಸದಂತೆ ಸೂಚಿಸಿದೆ.
ಸಂಸದೀಯ ಕ್ಷೇತ್ರದ ವ್ಯಾಪ್ತಿಯ ಅಕ್ಕಪಕ್ಕದ ಜಿಲ್ಲೆಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಪೋಸ್ಟಿಂಗ್ ನೀಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಈ ಸೂಚನೆ ನೀಡಿದೆ.
ಎರಡು ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ, ಎಲ್ಲಾ ರಾಜ್ಯಗಳು ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಸಂಸದೀಯ ಕ್ಷೇತ್ರದೊಳಗೆ ನಿಯುಕ್ತಿ ಮಾಡದಂತೆ ನೋಡಿಕೊಳ್ಳಬೇಕು ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಚುನಾವಣಾ ಆಯೋಗದ ವರ್ಗಾವಣೆ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಯೋಗದ ಹಿಂದಿನ ಸೂಚನೆಗಳಿಗೆ ಅನುಸಾರವಾಗಿ ಈಗಾಗಲೇ ಜಾರಿಗೊಳಿಸಲಾದ ವರ್ಗಾವಣೆಗಳು ಮತ್ತು ಪೋಸ್ಟಿಂಗ್ ಗಳಿಗೆ ಈ ನಿಯಮವು ಪೂರ್ವಾನ್ವಯವಾಗುತ್ತದೆ ಎಂದಿದೆ.
ಒಟ್ಟಾರೆಯಾಗಿ ತಮ್ಮ ತವರು ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅಥವಾ ಒಂದೇ ಸ್ಥಳದಲ್ಲಿ ಮೂರು ವರ್ಷ ಪೂರೈಸಿರುವ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗವು ರಾಜ್ಯಗಳಿಗೆ ಸೂಚಿಸಿದೆ.