ಬೆಂಗಳೂರು: ಖಾಸಗಿ ವಲಯದಲ್ಲಿ ದೈನಂದಿನ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಳ ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ತಿರಸ್ಕರಿಸಲು ನಿರ್ಧರಿಸಿದೆ.
ಕೇಂದ್ರ ಕಾರ್ಮಿಕ ಇಲಾಖೆಯು 1961ರ ಕರ್ನಾಟಕ ಅಂಗಡಿ ಮತ್ತು ಸ್ಥಾಪನೆ ಕಾಯಿದೆಗೆ ತಿದ್ದುಪಡಿ ತರುವ ಹಾಗೂ ಕಾರ್ಮಿಕರ ಕೆಲಸದ ಅವಧಿಯನ್ನು 9 ರಿಂದ 10 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿದೆ. ಆದರೆ ರಾಜ್ಯದಲ್ಲಿಈ ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ತಾವನೆಯನ್ನು ತಿರಸ್ಕರಿಸಲು ಮುಂದಾಗಿದೆ ಎನ್ನಲಾಗಿದೆ.
ಕಾರ್ಮಿಕರು ದಿನಕ್ಕೆ 9 ಗಂಟೆ ಮತ್ತು ವಾರದಲ್ಲಿ 48 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ನಿತ್ಯ 10 ಗಂಟೆ ಕೆಲಸದ ಅವಧಿಗೆ ಈಗಾಗಲೇ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಪ್ರಸ್ತಾವನೆಯನ್ನು ಸಂಪುಟ ಸಭೆಯಲ್ಲಿ ಸಿಎಂ ಹಾಗೂ ಸಚಿವರು ವಿರೋಧಿಸಿದ್ದಾರೆ ಎಂದು ಹೇಳಲಾಗಿದೆ.