ನವದೆಹಲಿ: ದೇಶದಲ್ಲಿ ಇಂಧನ ಅಭಾವ ಉಂಟಾಗಲಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಕೇಂದ್ರ ಸರ್ಕಾರ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಪ್ರಸ್ತುತ ದೇಶದ ಬಳಿ ಮುಂದಿನ 60 ದಿನಗಳವರೆಗೆ ಪೂರೈಕೆ ಮಾಡಲು ಸಾಕಾಗುವಷ್ಟು ಕಚ್ಚಾ ತೈಲದ ದಾಸ್ತಾನು ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ದೇಶದಲ್ಲಿ ಇಂಧನ ಭದ್ರತೆಯನ್ನು ಖಚಿತಪಡಿಸಿರುವ ಸರ್ಕಾರ, ತೈಲ ಕಂಪನಿಗಳ ಬಳಿ ಮತ್ತು ಆಯಕಟ್ಟಿನ ಮೀಸಲು ಕೇಂದ್ರಗಳಲ್ಲಿ ಭಾರಿ ಪ್ರಮಾಣದ ತೈಲ ಸಂಗ್ರಹವಿದೆ ಎಂದು ತಿಳಿಸಿದೆ.
ಕೇವಲ ಪೆಟ್ರೋಲ್-ಡೀಸೆಲ್ ಮಾತ್ರವಲ್ಲದೆ, ಅಡುಗೆ ಅನಿಲದ (LPG) ಕೊರತೆಯೂ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರಸ್ತುತ 8,00,000 ಟನ್ಗಳಷ್ಟು ಎಲ್ಪಿಜಿ ದಾಸ್ತಾನು ಲಭ್ಯವಿದೆ.
ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸರ್ಕಾರ ನಿಗಾವಹಿಸುತ್ತಿದ್ದು, ಸಾರ್ವಜನಿಕರು ಪ್ಯಾನಿಕ್ ಬೈಯಿಂಗ್ (ಆತಂಕದಿಂದ ಮುಗಿಬಿದ್ದು ಖರೀದಿಸುವುದು) ಮಾಡಬಾರದು ಎಂದು ವಿನಂತಿಸಿದೆ.








