ಧಾರವಾಡ : ಜಿಲ್ಲೆಯಲ್ಲಿ ಕೋಳಿ ಶೀತ ಜ್ವರದ ಬಗ್ಗೆ ಯಾವುದೇ ಪ್ರಕರಣಗಳು ವರದಿ ಆಗಿರುವದಿಲ್ಲ. ಕೋಳಿಗಳಲ್ಲಿ ಮತ್ತು ಇತರೆ ಪಕ್ಷಿಗಳಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕೆಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ರವಿ ಸಾಲಿಗೌಡರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಕೋಳಿ ಶೀತ ಜ್ವರ ಕಂಡುಬಂದಿರುತ್ತದೆ. ಇದು ಪಕ್ಷಿಗಳಲ್ಲಿನ ಮಾರಣಾಂತಿಕ ಕಾಯಿಲೆಯಾಗಿದ್ದು, ಶೇ.50ರಷ್ಟು ಕೋಳಿಗಳು ಸಾಯುವ ಸಂಭವ ಇರುತ್ತದೆ. ಇದು ಇನ್ಫ್ಲೂಯನ್ಸ ವೈರಸ್ (ಹೆಚ್ 5 ಎನ್ 1) ಸೋಂಕು. ಕೋಳಿಗಳಿಂದ ಮನುಷ್ಯರಿಗೆ ಈ ವೈರಸ್ ಹರಡುವ ಸಂಭವ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೋಳಿ ಮತ್ತು ಮೊಟ್ಟೆಯನ್ನು ಸೇವಿಸಲು ಯಾವುದೇ ನಿಬರ್ಂಧ ಇರುವುದಿಲ್ಲ. ಆದರೆ ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ಆಹಾರವಾಗಿ ಉಪಯೋಗಿಸಬಹುದು ಎಂದಿದ್ದಾರೆ. ನಮ್ಮ ಭಾರತೀಯ ಅಡಿಗೆ ಪದ್ಧತಿಯಲ್ಲಿ ಈ ವೈರಸ್ ಜೀವಂತವಾಗಿರಲು ಸಾಧ್ಯವಿರುವುದಿಲ್ಲ. ಹಾಗಾಗಿ ಸಾರ್ವಜನಿಕರು ಕೋಳಿ ಶೀತ ಜ್ವರದ ಬಗ್ಗೆ ಹೆಚ್ಚಿನ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 14.60 ಲಕ್ಷ ಕೋಳಿಗಳನ್ನು ಸಾಕಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ಜಿಲ್ಲೆಯಾದ್ಯಂತ ಕಂಡು ಬಂದಿರುವುದಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಜೈವಿಕ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ವಾಣಿಜ್ಯ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋಳಿಗಳಲ್ಲಿ ಮತ್ತು ಇತರೆ ಪಕ್ಷಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡಲು ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ಅವರು ಪ್ರಕಟಣೆ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಗ್ರಾಮೀಣ ಪತ್ರಕರ್ತರ ಗಮನಕ್ಕೆ: ‘ಜಿಲ್ಲಾ ಬಸ್ ಪಾಸ್’ಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
BREAKING: ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿಗೆ ಸಂಕಷ್ಟ: ಚುನಾವಣಾ ತಕರಾರು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್