ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ನಾಗರಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಸ್ಥಳೀಯ ವಿಳಾಸದ ದಾಖಲೆ ಇಲ್ಲದವರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 5 ಕೆಜಿ ತೂಕದ FTL (Free Trade LPG) ಸಿಲಿಂಡರ್ಗಳ ನಿಯಮವನ್ನು ಸರಳಗೊಳಿಸಿದೆ.
ಇನ್ನು ಮುಂದೆ ಹತ್ತಿರದ ಗ್ಯಾಸ್ ಏಜೆನ್ಸಿ ಅಥವಾ ವಿತರಕರಲ್ಲಿ ಕೇವಲ ಯಾವುದಾದರೂ ಒಂದು ಮಾನ್ಯವಾದ ಗುರುತಿನ ಚೀಟಿ (ID Proof) ತೋರಿಸಿ 5 ಕೆಜಿ ಸಿಲಿಂಡರ್ ಪಡೆಯಬಹುದು. ಇದಕ್ಕಾಗಿ ಬಾಡಿಗೆ ಕರಾರು ಅಥವಾ ವಿಳಾಸದ ದಾಖಲೆಗಳ ಅಗತ್ಯವಿಲ್ಲ.
ನಗರ ಪ್ರದೇಶಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಕಡಿಮೆ ಅನಿಲ ಬಳಸುವ ಸಣ್ಣ ಕುಟುಂಬಗಳಿಗೆ ಈ ಕ್ರಮವು ವರದಾನವಾಗಲಿದೆ.ಕಳೆದ ಮಾರ್ಚ್ 23 ರಿಂದ ಈವರೆಗೆ ಸುಮಾರು 5.7 ಲಕ್ಷ ಇಂತಹ ಸಣ್ಣ ಸಿಲಿಂಡರ್ಗಳು ಮಾರಾಟವಾಗಿವೆ. ಏಪ್ರಿಲ್ 4 ರಂದು ಒಂದೇ ದಿನ 71,000 ಕ್ಕೂ ಹೆಚ್ಚು ಸಿಲಿಂಡರ್ಗಳು ಮಾರಾಟವಾಗುವ ಮೂಲಕ ಭಾರಿ ಬೇಡಿಕೆ ವ್ಯಕ್ತವಾಗಿದೆ.
ನಿಮ್ಮ ಹತ್ತಿರದ ಗ್ಯಾಸ್ ವಿತರಕರು (Indane, HP, Bharat Gas), ಆಯ್ದ ಪೆಟ್ರೋಲ್ ಬಂಕ್ಗಳು ಅಥವಾ ಕಿರಣಾ ಅಂಗಡಿಗಳಿಗೆ ಭೇಟಿ ನೀಡಿ.ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಯನ್ನು ಸಿದ್ಧವಾಗಿಟ್ಟುಕೊಳ್ಳಿ.
ವಿಳಾಸದ ದಾಖಲೆ ಇಲ್ಲದೆ ‘ಛೋಟು’ (Chhotu) ಅಥವಾ 5 ಕೆಜಿ ಎಫ್ಟಿಎಲ್ ಸಿಲಿಂಡರ್ ಬೇಕೆಂದು ಕೇಳಿ. ಹಣ ಪಾವತಿಸಿ ತಕ್ಷಣವೇ ಸಿಲಿಂಡರ್ ಪಡೆಯಿರಿ.
ಮರುಪಾವತಿ ಸೌಲಭ್ಯ: ಒಂದು ವೇಳೆ ನೀವು ಸಿಲಿಂಡರ್ ಅನ್ನು ಹಿಂತಿರುಗಿಸಲು ಬಯಸಿದರೆ, ಬಳಕೆಯ ಅವಧಿಯನ್ನು ಲೆಕ್ಕಿಸದೆ ಸುಮಾರು 500 ರೂ.ಗಳ ವರೆಗೆ ಮರುಪಾವತಿ ಪಡೆಯುವ ಅವಕಾಶವೂ ಇದೆ.








