ತೆಲಂಗಾಣದ ಹನಮಕೊಂಡದಲ್ಲಿ ಸುಮಾರು 300 ನಾಯಿಗಳನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ನಾಯಿಗಳನ್ನು ಕೊಂದ ಆರೋಪದ ನಂತರ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ದೃಢಪಡಿಸಿದ್ದಾರೆ.
ಜನವರಿ 6 ರಿಂದ ಮೂರು ದಿನಗಳ ಅವಧಿಯಲ್ಲಿ ಶಾಯಂಪೇಟೆ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ 300 ಬೀದಿ ನಾಯಿಗಳನ್ನು ಕೊಲ್ಲಲಾಗಿದೆ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತರಾದ ಅದುಲಾಪುರಂ ಗೌತಮ್ ಮತ್ತು ಫರ್ಜಾನಾ ಬೇಗಂ ಜನವರಿ 9 ರಂದು ನೀಡಿದ ದೂರಿನಲ್ಲಿ ಹೇಳಿದ್ದಾರೆ.
ನಾಯಿಗಳಿಗೆ ವಿಷ ಹಾಕಲು ಸರಪಂಚರು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡು ನಂತರ ಅವರ ಶವಗಳನ್ನು ಗ್ರಾಮಗಳ ಹೊರವಲಯದಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಶ್ಯಾಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ








