ಬೆಂಗಳೂರು: ವೇತನ ಹೆಚ್ಚಳ, ಸೇವೆ ಖಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎನ್ ಹೆಚ್ ಎಂ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿಗೆ 6ನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದರೂ ಕನಿಷ್ಠ ಸೌಜನ್ಯಕ್ಕಾದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತ್ರ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆ ಆಲಿಸುವಂತ ಸೌಜನ್ಯವನ್ನು ತೋರದೇ ಇರೋದು ವಿಪರ್ಯಾಸವೇ ಸರಿ.
ಫೆಬ್ರವರಿ.24ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎನ್ ಹೆಚ್ ಎಂ ನರ್ಸಿಂಗ್ ಆಫೀಸರ್ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ, ಹುದ್ದೆ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಗಲು ರಾತ್ರಿ ಎನ್ನದೇ ಫ್ರೀಡಂ ಪಾರ್ಕ್ ನಲ್ಲೇ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ.
ಮಾರ್ಚ್.1ರ ಇಂದಿಗೆ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ಸರ್ಕಾರ ಬರೋದಕ್ಕೂ ಮುನ್ನ ಇದೇ ನೌಕರರು ಪ್ರತಿಭಟನೆ ನಡೆಸುತ್ತಿದ್ದಂತ ಸ್ಥಳಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡಿ, ನಮ್ಮ ಸರ್ಕಾರ ಬಂದ್ರೆ ನಿಮ್ಮನ್ನು ಖಾಯಂಗೊಳಿಸುವುದಾಗಿ ಘೋಷಿಸಿದ್ದರು. ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಎನ್ ಹೆಚ್ ಎಂ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಭರವಸೆ ನೀಡಲಾಗಿತ್ತು.
ಆದರೇ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವೇ ಕಳೆಯುತ್ತಿದೆ. ಡಿಸಿಎಂ ಆದಂತ ಡಿ.ಕೆ ಶಿವಕುಮಾರ್ ಆಗಲೀ, ಪ್ರಣಾಳಿಕೆಯಲ್ಲಿ ಘೋಷಿಸಿದಂತ ಸಿಎಂ ಸಿದ್ಧರಾಮಯ್ಯ ಆಗಲೀ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಚಕಾರವನ್ನೇ ಎತ್ತುತ್ತಿಲ್ಲ. ಅಲ್ಲದೇ ಅಂದು ಖಾಯಂ ಮಾಡುವುದಾಗಿ ಹೇಳಿದ್ದ ಸಚಿವರುಗಳು, ಇಂದು ಖಾಯಂ ಅಸಾಧ್ಯ ಹಾಗೆ ಹೀಗೆ ಎನ್ನುವ ಸಬೂಹು ನೀಡುತ್ತಿದ್ದಾರೆ ಎಂಬುದಾಗಿ ನೌಕರರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವಂತ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ನೌಕರರ ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಬೇಡಿಕೆ ಆಲಿಸಬೇಕಿತ್ತು. ಒಂದು ವಾರವೇ ಕಳೆಯುತ್ತಾ ಬಂದಿದ್ದರೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡದೇ ಇರೋದು, ನೌಕರರ ಮೇಲೆ ಇವರಿಗಿರುವಂತ ಕಾಳಜಿ ಎಷ್ಟು ಎಂಬುದನ್ನು ತೋರಿಸುತ್ತದೆ ಎಂದು ಪ್ರತಿಭಟನಾ ನಿರತ ನೌಕರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಾನ್ಯ ಸಿಎಂ ಸಿದ್ಧರಾಮಯ್ಯನವರೇ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದರಂತೆ ನಮ್ಮ ವೇತನವನ್ನು ಹೆಚ್ಚಿಸಿ. ಅಧಿಕಾರಕ್ಕೆ ಬರುವ ಮೊದಲು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತ ಎನ್ ಹೆಚ್ ಎಂ ನೌಕರರ ಖಾಯಂ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರ ಬೇಡಿಕೆ ಈಡೇರಿಸುತ್ತಾ? ಕನಿಷ್ಠ ಸೌಜನ್ಯಕಾದರೂ ಆರೋಗ್ಯ ಸಚಿವ ದಿನೇಶ್ ಗುಂಡಾರಾವ್ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ, ಪ್ರತಿಭಟನಾ ನಿರತ ನೌಕರರ ಬೇಡಿಕೆ ಆಲಿಸೋ ಪ್ರಯತ್ನ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ
ಮಾ.10ರಂದು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ‘ಜನಸ್ನೇಹಿ ಅಯವ್ಯಯ’ ಮಂಡನೆ: ಸಚಿವ ಪ್ರಿಯಾಂಕ್ ಖರ್ಗೆ