ಮಂಡ್ಯ : ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಚರ್ಚಿಸಲು ಮುಂದಿನ ತಿಂಗಳು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ಕೃಷ್ಣಪ್ಪ ಗುರುವಾರ ಹೇಳಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಪ್ರತಿ ವರ್ಷ ದೆಹಲಿಯಲ್ಲಿ ಸಮಾವೇಶವನ್ನು ಆಯೋಜನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಆಹಾರ ಇಲಾಖೆಯ ಕೇಂದ್ರ ಸಚಿವರು ನಮ್ಮ ರಾಜ್ಯದವರೇ ಆಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲೆ ಮುಂದಿನ ತಿಂಗಳು ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾವೇಶದಲ್ಲಿ ಎಲ್ಲಾ ರಾಜ್ಯಗಳ ಪದಾಧಿಕಾರಿಗಳು ಭಾಗವಹಿಸಲಿದ್ದು, ಸಮಾವೇಶದ ಮೂಲಕ ನಮ್ಮ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದೆ ಇಡಲಾಗುವುದು ಎಂದರು.
ನನ್ನ ಅಧಿಕಾರ ಅವಧಿಯಲ್ಲಿ ಜನಪ್ರತಿನಿಧಿಗಳ ನಿರಂತರ ಸಂಪರ್ಕ ಸಾಧಿಸಿ ನ್ಯಾಯಬೆಲೆ ಅಂಗಡಿ ಮಾಲೀಕರ ಬೇಡಿಕೆಗಳಿಗಾಗಿ ಹೋರಾಡಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ನ್ಯಾಯ ಅಂಗಡಿ ಮಾಲೀಕರ ಕಮೀಷನ್ ಹೆಚ್ಚಳ, ಸರ್ವರ್ ಸಮಸ್ಯೆ ಸೇರಿದಂತೆ ಅಂಗಡಿ ಮಾಲೀಕರಿಗೆ ಇದ್ದ ಹಲವು ಸಮಸ್ಯೆಗಳ ಬಗ್ಗೆ ಇಂದಿಗೂ ಹೋರಾಟ ನಡೆಸುತ್ತಿದ್ದೇನೆ ಎಂದರು.
ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಹೋರಾಟ ಮಾಡಿಕೊಂಡು ಬಂದು ಮಾಲೀಕರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಬಗ್ಗೆ ಎಲ್ಲ ಆಡಳಿತಾರೂಢ ಸರ್ಕಾರಗಳು ಪೂರಕ ಸಹಕಾರ ನೀಡುತ್ತ ಬಂದಿವೆ. ಇನ್ನಷ್ಟು ಬೇಡಿಕೆಗಳ ಕುರಿತು ಸರ್ಕಾರದ ಮುಂದೆ ಮಂಡಿಸಲಾಗಿದೆ ಎಂದು ವಿವರಿಸಿದರು.
ಬೇಡಿಕೆಗಳ ಕುರಿತು ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕೆಂದು ಟಿ.ಕೃಷ್ಣಪ್ಪ ಮನವಿ ಮಾಡಿದರು.
ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರ ನಿಗಧಿಪಡಿಸಿರುವ ಷರತ್ತುಗಳ ಅನುಗುಣವಾಗಿ ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ವಿತರಣೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು, ತಿಂಗಳ ಪೂರ್ತಿ ಪಡಿತರ ವಿತರಣೆ ಮಾಡುವ ಮೂಲಕ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದ ಪಡಿತರ ವಿತರಕರಿಗೆ ಸರ್ಕಾರದಿಂದ ಬರಬೇಕಾದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಕಿವಿಮಾತು ಹೇಳಿದರು.
ಸುದ್ದಿಗೊಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಬಿ.ರಾಜಣ್ಣ, ಖಜಾಂಚಿ ಮಂಟೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಬಿ.ದೇವರಾಜು, ನಿರ್ದೇಶಕ ನಿಂಗೇಗೌಡ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
‘ಸಿಗಂದೂರು ಸೇತುವೆ’ ನೋಡೋದಕ್ಕೆ ತೆರಳುವವರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’
ರಾಜ್ಯ ಸರ್ಕಾರದಿಂದ ‘ಟ್ರಾಫಿಕ್ ದಂಡ ಬಾಕಿ’ ಉಳಿಸಿಕೊಂಡಿರೋ ‘ವಾಹನ ಸವಾರ’ರಿಗೆ ಗುಡ್ ನ್ಯೂಸ್