ಬೆಂಗಳೂರು : ಅಂಚೆ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಅಂಚೆ ಕಚೇರಿಗಳಲ್ಲಿ ದ ಸ್ಪೀಡ್ ಪೋಸ್ಟ್ ಸೇವೆ ಸ್ಥಗಿತಗೊಂಡಿದೆ. ರಾಜ್ಯದ ವಿವಿಧ ಅಂಚೆ ಕಚೇರಿಗಳಲ್ಲಿ ಅಂಚೆ ಸೇವೆಗಳ ಬುಕ್ಕಿಂಗ್ನಲ್ಲಿ ವ್ಯತ್ಯಯ ವಾಗುತ್ತಿದ್ದು, ಪೋಸ್ಟ್, ಪಾರ್ಸೆಲ್, ಲಾಜಿಸ್ಟಿಕ್ಸ್ ಸೇರಿದಂತೆ ಅನೇಕ ಸೇವೆಗಳ ಬುಕ್ಕಿಂಗ್ ಮಾಡಲಾಗದೆ ಗ್ರಾಹಕರು ಪರದಾಡುವಂತಾಗಿದೆ.
ಹೌದು, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪಾರ್ಸೆಲ್ ಸೇರಿದಂತೆ ವಿವಿಧ ಸೇವೆಗಳಿಗಾಗಿ ಗ್ರಾಹಕರು ಅಂಚೆ ಕಚೇರಿಗೆ ತೆರಳಿದಾಗ ಮೊದಲಿನಂತೆ ಬುಕ್ಕಿಂಗ್ ಆಗುತ್ತಿಲ್ಲ. ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ಸಾಫ್ಟ್ವೇರ್ ಅಳವಡಿಸಿದ ನಂತರ ಸಮಸ್ಯೆ ಉಂಟಾಗಿದೆ. ತುರ್ತು ಸ್ಪೀಡ್ ಪೋಸ್ಟ್ ಸೌಲಭ್ಯ ಸಿಗದೇ ಗ್ರಾಹಕರಿಗೆ ತೊಂದರೆಯಾಗಿದೆ. ಅಂಚೆ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಇನ್ಫೋಸಿಸ್ ಸಾಫ್ಟ್ ವೇರ್ ಬಳಕೆ ಮಾಡಲಾಗುತ್ತಿದ್ದು, ಇದೀಗ ಅಂಚೆ ಇಲಾಖೆ ಸ್ವತಃ ತನ್ನದೇ 2.0 ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದು, ಜೂನ್ ಕೊನೆಯ ವಾರದಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ.ಏಕಾಏಕಿ ಸಾಫ್ಟ್ವೇರ್ ಕೈಕೊಟ್ಟಿದ್ದು, ತಾಂತ್ರಿಕ ತೊಂದರೆಯ ಕಾರಣ ರಾಜ್ಯಾದ್ಯಂತ ಸ್ಪೀಡ್ ಪೋಸ್ಟ್ ಸೇವೆ ಸಾಧ್ಯವಾಗಿಲ್ಲ. ಇದರಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ.