ಮುಂಬೈ:ಸೈಬರ್ ಅಪರಾಧಿಗಳು ಈಗ ತಮ್ಮ ವಂಚನೆಯ ಜಾಲವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಸಾಮಾನ್ಯವಾಗಿ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಲ್ಲಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ವಂಚಕರು, ಇದೀಗ ಮುಂಬೈನಲ್ಲಿ ಮಹಿಳೆಯೊಬ್ಬರನ್ನು ಖುದ್ದಾಗಿ ಭೇಟಿಯಾಗಿ ಬರೋಬ್ಬರಿ 60 ಲಕ್ಷ ರೂಪಾಯಿ ನಗದನ್ನು ಪಡೆದು ಪರಾರಿಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮುಂಬೈನ ಪಶ್ಚಿಮ ಉಪನಗರದ 58 ವರ್ಷದ ಮಹಿಳೆಯೊಬ್ಬರಿಗೆ ಇತ್ತೀಚೆಗೆ ಕರೆ ಮಾಡಿದ್ದ ವಂಚಕರು, ತಾವು ದೆಹಲಿ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಆಧಾರ್ ಕಾರ್ಡ್ ಬಳಸಿ ತೆರೆಯಲಾದ ಬ್ಯಾಂಕ್ ಖಾತೆಯು 1.5 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣದಲ್ಲಿ ಸಿಲುಕಿದೆ ಎಂದು ಬೆದರಿಸಿದ್ದರು.
ಪ್ರಕರಣದಿಂದ ಹೊರಬರಲು ನಿಮ್ಮ ಮೇಲಿರುವ ಸಾಲಗಳನ್ನು ತೀರಿಸಬೇಕು ಎಂದು ನಂಬಿಸಿದ ವಂಚಕರು, ಮಹಿಳೆಯ ಆಸ್ತಿಯ ಪತ್ರಗಳನ್ನು (7/12 ಎಕ್ಸ್‌ಟ್ರಾಕ್ಟ್) ಪಡೆದುಕೊಂಡು ಅದನ್ನು ತಕ್ಷಣ ಮಾರಾಟ ಮಾಡುವಂತೆ ಒತ್ತಡ ಹೇರಿದ್ದರು.
ಇದು ಸಾಮಾನ್ಯ ಡಿಜಿಟಲ್ ಅರೆಸ್ಟ್ ಪ್ರಕರಣಗಳಿಗಿಂತ ಭಿನ್ನವಾಗಿತ್ತು. ಸಾಮಾನ್ಯವಾಗಿ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುವ ವಂಚಕರು, ಇಲ್ಲಿ ಹಣ ಪಡೆಯಲು ತಮ್ಮ ಸಹಚರರನ್ನು ಮಹಿಳೆಯ ಮನೆಯ ಸಮೀಪಕ್ಕೆ ಕಳುಹಿಸಿದ್ದರು.
ಮೊದಲು 35 ಲಕ್ಷ ರೂಪಾಯಿ ಹಾಗೂ ನಂತರ 25 ಲಕ್ಷ ರೂಪಾಯಿ ನಗದನ್ನು ಮಹಿಳೆಯಿಂದ ಅವರ ಮನೆಯ ಹತ್ತಿರದ ಬಸ್ ನಿಲ್ದಾಣದಲ್ಲಿಯೇ ಪಡೆದುಕೊಳ್ಳಲಾಗಿದೆ. ಹಣ ಪಡೆಯಲು ಬರುವ ವ್ಯಕ್ತಿಯ ಫೋಟೋವನ್ನು (ಕೇವಲ ದೇಹದ ಭಾಗ, ಮುಖವಿಲ್ಲದೆ) ವಂಚಕರು ಮಹಿಳೆಯ ವಾಟ್ಸಾಪ್‌ಗೆ ಕಳುಹಿಸಿ ನಂಬಿಕೆ ದ್ರೋಹ ಎಸಗಿದ್ದಾರೆ.








