ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಕರಡು ನಿಯಮಾವಳಿ ಪ್ರಕಟಿಸಿದ್ದು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಾಸಾಗಲು ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡೂ ಸೇರಿ ಶೇ.33 ಅಂಕ ಪಡೆದರೆ ಸಾಕೆಂದು ಹೇಳಿದೆ.
ಹೌದು, ಪ್ರತಿ ವಿಷಯದಲ್ಲಿ ಆಂತರಿಕ ಮೌಲ್ಯಮಾಪನದಲ್ಲಿ ಶೇ.20ಕ್ಕೆ 20 ಅಂಕ ಪಡೆದರೆ ಉಳಿದ 13 ಅಂಕಗಳನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದರೂ ವಿದ್ಯಾರ್ಥಿ ಪಾಸ್, ಶೇ.20ರಷ್ಟು ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಇರುತ್ತದೆ. 625ಕ್ಕೆ 206 ಅಂಕ ಗಳಿಸಿದ ವಿದ್ಯಾರ್ಥಿ, ಬೇರೆ ವಿಷಯದಲ್ಲಿ ಶೇ.30ಕ್ಕಿಂತ ಕಡಿಮೆ ಅಂಕ ಪಡೆದರೂ ಇನ್ನು ಪಾಸ್.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಾಯ್ದೆ. 1966 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 16) ಸೆಕ್ಷನ್ 26 ಮತ್ತು ಸೆಕ್ಷನ್ 27 ರ ಮೂಲಕ ಪದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು, ಕರ್ನಾಟಕ ಸರ್ಕಾರದ ಅನುಮೋದನೆ ಮೇರೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೊದಲ ನಿಯಮಾವಳಿಗಳು, 1966ಗೆ ಕೆಳಗಿನಂತೆ ಕರಡು ತಿದ್ದುಪಡಿ ನಿಯಮಗಳನ್ನು ಪ್ರಕಟಿಸಲಾಗಿರುತ್ತದೆ. ಇದರಿಂದ ಪರಿಣಾಮ ಬೀರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಮತ್ತು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿ ಮುಗಿದ ನಂತರ ಸದರಿ ಕರಡು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ.
ಮೇಲೆ ನಿರ್ದಿಷ್ಟಪಡಿಸಿದ ಅವಧಿ ಮುಗಿಯುವ ಮೊದಲು ಸದರಿ ಕರಡಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ಮಂಡಳಿಗೆ ಸ್ವೀಕೃತವಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ಮಂಡಳಿಯು ಪರಿಗಣಿಸುತ್ತದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, 3 ನೇ ಮಹಡಿ, 6 ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ಸಲ್ಲಿಸಬಹುದು.
ದ್ವಿತೀಯ ಪಿಯುಸಿ
ಕರ್ನಾಟಕ ಸರ್ಕಾರವು, 1983 ರ ಕರ್ನಾಟಕ ಶಿಕ್ಷಣ ಕಾಯ್ದೆಯ (1995ರ ಕರ್ನಾಟಕ ಕಾಯ್ದೆ-1) ಸೆಕ್ಷನ್ 7ರ ಉಪವಿಭಾಗ (1) ರ ಷರತ್ತು (i) ಮತ್ತು ಸೆಕ್ಷನ್ 145 ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಳಗಿನಂತೆ ಕರಡು ತಿದ್ದುಪಡಿ ನಿಯಮಗಳನ್ನು ಪ್ರಕಟಿಸಲಾಗಿದೆ. ಇದರಿಂದ, ಪರಿಣಾಮ ಬೀರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಮತ್ತು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿ ಮುಗಿದ ನಂತರ ಸದರಿ ಕರಡು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ.
ಮೇಲೆ ನಿರ್ದಿಷ್ಟಪಡಿಸಿದ ಅವಧಿ ಮುಗಿಯುವ ಮೊದಲು ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ.ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-560 001 ರವರಿಗೆ ಸಲ್ಲಿಸಬಹುದು.
ಈ ನಿಯಮಗಳು 2025-26ನೇ ಶೈಕ್ಷಣಿಕ ವರ್ಷದಿಂದ ಮತ್ತು ನಂತರದ ಶೈಕ್ಷಣಿಕ ವರ್ಷದಿಂದ ಮಂಡಳಿಯ ಪರೀಕ್ಷೆಗೆ ಹಾಜರಾಗುವ ಎಲ್ಲಾ ದ್ವಿತೀಯ ಪಿ.ಯಿ.ಸಿ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತವೆ.
ಕನಿಷ್ಠ ಉತ್ತೀರ್ಣ ಶೇಕಡಾವಾರು:- ಕನಿಷ್ಠ ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು ಈ ಕೆಳಗಿನಂತೆ
ನಿಯಂತ್ರಿಸಲಾಗುತ್ತದೆ, ಅವುಗಳೆಂದರೆ: –
(ಎ) ಅಭ್ಯರ್ಥಿಯು ಪ್ರತಿ ವಿಷಯದಲ್ಲಿ ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಒಳಗೊಂಡಂತೆ ಪ್ರತಿ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ 33% ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲಾಗುತ್ತದೆ.
(ಬಿ) ಯಾವುದೇ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನವಿಲ್ಲದ ವಿಷಯಗಳಲ್ಲಿ 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯಬೇಕಾಗುತ್ತದೆ:
ಅಂಕಗಳನ್ನು ಆದರೆ, ಈ ಕನಿಷ್ಠ ಅಸಾಧಾರಣ ಸಂದರ್ಭಗಳಲ್ಲಿ ಮತ್ತು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು ಸಡಿಲಿಸಬಹುದು ಅಥವಾ ಮಾರ್ಪಡಿಸಬಹುದು.
(ಸಿ) ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನ ಇರುವ ವಿಷಯಗಳಲ್ಲಿ, 70 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 21 ಅಂಕಗಳನ್ನು ಪಡೆಯಬೇಕು:
ಆದರೆ, ಈ ಕನಿಷ್ಠ ಅಂಕಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು ಸಡಿಲಿಸಬಹುದು ಅಥವಾ ಮಾರ್ಪಡಿಸಬಹುದು.
3. ಪ್ರಾಯೋಗಿಕ ಪರೀಕ್ಷೆಗಳಿಗೆ ಸಾಮಾನ್ಯ ಷರತ್ತುಗಳು:- ಪ್ರಾಯೋಗಿಕ ಅಂಶವನ್ನು ಹೊಂದಿರುವ
ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಷರತ್ತುಗಳ ಪ್ರಕಾರ, ಪ್ರಾಯೋಗಿಕ ಪರೀಕ್ಷೆಗೆ ಅಸ್ತಿತ್ವದಲ್ಲಿರುವ 30 ಅಂಕಗಳ ಹಂಚಿಕೆಯಿಂದ ವಿಚಲನಗೊಂಡು, ಪ್ರಾಯೋಗಿಕ ಪರೀಕ್ಷೆಯನ್ನು ಗರಿಷ್ಠ 20 ಅಂಕಗಳಿಗೆ ನಡೆಸಲಾಗುವುದು ಮತ್ತು ಉಳಿದ 10 ಅಂಕಗಳನ್ನು ಈ ಕೆಳಗಿನ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗೆ ನೀಡಲಾಗುತ್ತದೆ, ಅವುಗಳೆಂದರೆ
(ಎ) ಪ್ರತಿ ವಿಷಯದಲ್ಲೂ (ತಾತ್ವಿಕ ಮತ್ತು ಪ್ರಾಯೋಗಿಕ ತರಗತಿಗಳು ಸೇರಿದಂತೆ) ಕನಿಷ್ಠ 75% ಹಾಜರಾತಿಯನ್ನು ಹೊಂದಿದಲ್ಲಿ, ಅಂತಹ ಅಭ್ಯರ್ಥಿಯು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ;
(ಬಿ) ಅಭ್ಯರ್ಥಿಯು ಪ್ರತಿಯೊಂದು ಪ್ರಾಯೋಗಿಕ ವಿಷಯಕ್ಕೆ ನಿರ್ದಿಷ್ಟಪಡಿಸಿದ ಕನಿಷ್ಠ ಸಂಖ್ಯೆಯ ಪ್ರಾಯೋಗಗಳನ್ನು ನಿರ್ವಹಿಸಿರಬೇಕು.
(ಸಿ) ಅಭ್ಯರ್ಥಿಯು ಪ್ರಾಯೋಗಿಕ ದಾಖಲೆ ಪುಸ್ತಕಗಳಲ್ಲಿ ನಿರ್ವಹಿಸಿದ ಪುಯೋಗಗಳನ್ನು ದಾಖಲಿಸಿ ಅದನ್ನು ಸಂಬಂಧಿಸಿದ ವಿಷಯದ ಉಪನ್ಯಾಸಕರಿಂದ ದೃಢೀಕರಿಸಿ ಸಲ್ಲಿಸಿರಬೇಕು; ಮತ್ತು
(ಡಿ) ಅಭ್ಯರ್ಥಿಯು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿರಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ.
BREAKING: ನಾಳೆ ‘ಸಾಗರ’ ತಾಲ್ಲೂಕಿನ ಶಾಲೆಗಳಿಗೆ ರಜೆ: ತಹಶೀಲ್ದಾರ್ ಚಂದ್ರಶೇಖರ ನಾಯ್ಕ್ ಆದೇಶ
ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದನ್ನು ‘ಪೊಲೀಸ್ ಇಲಾಖೆ’ ಸಹಿಸುವುದಿಲ್ಲ: ಸಾಗರ ಡಿವೈಎಸ್ಪಿ ಎಚ್ಚರಿಕೆ