ಕಠ್ಮಂಡು: ನೇಪಾಳದ ಯುವ ಪ್ರಧಾನಿ ಬಾಲೆಂದ್ರ ಶಾ (ಬಾಲೆನ್ ಶಾ) ಅವರು ತಮ್ಮ ಸಚಿವ ಸಂಪುಟದ ಕಾರ್ಮಿಕ, ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ಸಚಿವ ದೀಪಕ್ ಕುಮಾರ್ ಶಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪದಚ್ಯುತಗೊಳಿಸಿದ್ದಾರೆ. ಅಧಿಕಾರ ದುರುಪಯೋಗ ಮತ್ತು ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ವರದಿಗಳ ಪ್ರಕಾರ, ಸಚಿವ ದೀಪಕ್ ಕುಮಾರ್ ಶಾ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಪತ್ನಿ ಜೂನು ಶ್ರೇಷ್ಠಾ ಅವರನ್ನು ಆರೋಗ್ಯ ವಿಮಾ ಮಂಡಳಿಯ ಸದಸ್ಯೆಯಾಗಿ ಮುಂದುವರಿಯುವಂತೆ ಮಾಡಲು ಪ್ರಭಾವ ಬೀರಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದ ರಾಷ್ಟ್ರೀಯ ಸ್ವತಂತ್ರ ಪಕ್ಷದ (RSP) ಶಿಸ್ತು ಸಮಿತಿಯು, ಸಚಿವರು ಪಕ್ಷದ ನೀತಿ ಸಂಹಿತೆಯನ್ನು ಗಾಳಿಗೆ ತೂರಿದ್ದಾರೆ ಎಂದು ವರದಿ ನೀಡಿತ್ತು.
ರಾಷ್ಟ್ರೀಯ ಸ್ವತಂತ್ರ ಪಕ್ಷದ ಅಧ್ಯಕ್ಷ ರಬಿ ಲಮಿಚಾನೆ ಅವರು ಸಚಿವರನ್ನು ವಜಾಗೊಳಿಸುವಂತೆ ಪ್ರಧಾನಿಯವರಿಗೆ ಅಧಿಕೃತ ಪತ್ರ ಬರೆದಿದ್ದರು. ಕೇವಲ ಎರಡು ವಾರಗಳ ಹಿಂದೆಯಷ್ಟೇ (ಮಾರ್ಚ್ 28) ಅಧಿಕಾರ ವಹಿಸಿಕೊಂಡಿದ್ದ ದೀಪಕ್ ಕುಮಾರ್ ಶಾ, ಅಲ್ಪ ಅವಧಿಯಲ್ಲೇ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.








