ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್-ಯುಜಿ 2026 ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ಇಂದು ಅಧಿಕೃತವಾಗಿ ಕೈಗೆತ್ತಿಕೊಂಡಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿರುವ ಸಿಬಿಐ, ಹಗರಣದ ಮೂಲ ಪತ್ತೆಹಚ್ಚಲು ದೇಶದ ವಿವಿಧೆಡೆ ದಾಳಿ ನಡೆಸಲು ವಿಶೇಷ ತಂಡಗಳನ್ನು ರಚಿಸಿದೆ.
ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಮೇ 3ರಂದು ನಡೆದಿದ್ದ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹಗರಣದ ಕಬಂಧಬಾಹುಗಳು ಹಲವು ರಾಜ್ಯಗಳಿಗೆ ಹರಡಿರುವ ಶಂಕೆಯಿದ್ದು, ಬಿಹಾರ, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಿಬಿಐ ವಿಶೇಷ ತಂಡಗಳನ್ನು ರವಾನಿಸಲಾಗಿದೆ.ಪರೀಕ್ಷಾ ಪತ್ರಿಕೆ ಸೋರಿಕೆಯ ಹಿಂದೆ ಯಾವುದಾದರೂ ದೊಡ್ಡ ಮಾಫಿಯಾ ಕೆಲಸ ಮಾಡಿದೆಯೇ ಅಥವಾ ಎನ್‌ಟಿಎ (NTA) ಒಳಗಿನ ಸಿಬ್ಬಂದಿಗಳ ಕೈವಾಡವಿದೆಯೇ ಎಂಬ ಬಗ್ಗೆ ಸಿಬಿಐ ಆಳವಾದ ತನಿಖೆ ನಡೆಸಲಿದೆ.
ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಈಗಾಗಲೇ ರದ್ದುಗೊಳಿಸಿದೆ.ಶೀಘ್ರದಲ್ಲೇ ಹೊಸ ಪರೀಕ್ಷಾ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.ಮರು ಪರೀಕ್ಷೆಗೆ ವಿದ್ಯಾರ್ಥಿಗಳು ಮತ್ತೆ ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.








