ಬೆಂಗಳೂರು : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ 18 ಭೌಗೋಳಿಕ ಪ್ರದೇಶಗಳಲ್ಲಿ ನಗರ ಅನಿಲ ವಿತರಣೆ ಯೋಜನೆಗಳನ್ನು ಅನುಷ್ಠಾನಗೊಳಿಸಲು 8 ನಗರ ಅನಿಲ ವಿತರಣ ಸಂಸ್ಥೆಗಳನ್ನು ಅಧಿಕೃತವಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ನಗರ ಅನಿಲ ವಿತರಣೆ ಸಂಸ್ಥೆಗಳು, ಕೊಳವೆ ನೈಸರ್ಗಿಕ ಅನಿಲ ವಿತರಣೆಯನ್ನು ಗೃಹ ಬಳಕೆ, ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗಗಳಿಗೆ ಪೂರೈಸಲು ನಗರ ಅನಿಲ ವಿತರಣೆ ಜಾಲವನ್ನು ಅಭಿವೃದ್ಧಿಪಡಿಸುವ ಜವಬ್ದಾರಿಯನ್ನು ಹೊಂದಿದೆ. ಸಿ.ಎನ್.ಜಿ. ಸ್ಟೇಷನ್‍ಗಳ ಮೂಲಕ ವಾಹನಗಳಿಗೆ ಇಂಧನವಾಗಿ ಪೂರೈಸಲಾಗುತ್ತಿದೆ.
ಭಾರತ ಸರ್ಕಾರವು ಸಿ.ಜಿ.ಡಿ ಯೋಜನೆಗಳನ್ನು ಸಾರ್ವಜನಿಕ ಉಪಯುಕ್ತ ಯೋಜನೆಗಳೆಂದು ಪರಿಗಣಿಸಿದೆ. ಈ ಯೋಜನೆಗಳು ಗೃಹ ಬಳಕೆಗಾಗಿ ಹಾಗೂ ವಾಹನ ಇಂಧನವಾಗಿ ಶುದ್ಧ ಮತ್ತು ಹಸಿರು ಇಂಧನ ತರುವುದಲ್ಲದೆ ಇದು ರಾಜ್ಯದ ಸುಸ್ಥಿರ ಕೈಗಾರಿಕೆ ಬೆಳವಣಿಗೆಗೆ ಒಂದು ಸಾಧನವಾಗಿದೆ.
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಾಲಯದ ಕಾರ್ಯದರ್ಶಿಯವರ ಪ್ರಾಮಾಣೀಕರಣ ಸೇರಿದಂತೆ ಸಿಜಿಡಿ ವಲಯದ ತ್ವರಿತ ಅಭಿವೃದ್ಧಿಗಾಗಿ ಏಕರೂಪದ ಚೌಕಟ್ಟನ್ನು ರಚಿಸಲು ಅನುಕೂಲವಾಗುವಂತೆ ಸಿಜಿಡಿ ನೀತಿಯನ್ನು ರಚಿಸಲು ವಿನಂತಿಸಿರುತ್ತಾರೆ. ಇದರಲ್ಲಿ ರಸ್ತೆ ಪುನರ್ ಸ್ಥಾಪನೆ / ಅನುಮತಿ ಶುಲ್ಕವು ಸೇರಿರುತ್ತದೆ. ಇದಲ್ಲದೆ, ಭಾರತದಲ್ಲಿ ಕೆಲವು ರಾಜ್ಯಗಳು ಅಳವಡಿಸಿಕೊಂಡಿರುವ ಬೆಸ್ಟ್ ಪ್ರಾಕ್ಟೀಸ್‍ಗಳನ್ನು ಉಲ್ಲೇಖಿಸಿದ್ದು, ಇದರಲ್ಲಿ ಉತ್ತರ ಪ್ರದೇಶದ ರಾಜ್ಯದಲ್ಲಿ ಪ್ರತಿ ಕಿ.ಮೀ.ಗೆ ರೂ 1000/- ಗಳ ಅನುಮತಿ ಶುಲ್ಕವನ್ನು ನಿರ್ದಿಷ್ಟವಾಗಿ ಪಟ್ಟಿ ಮಾಡಲಾಗಿರುತ್ತದೆ.
ಪಿ.ಎನ್.ಜಿ.ಆರ್.ಬಿ ಕಾರ್ಯದರ್ಶಿಗಳ 2021ರ ಸೆಪ್ಟೆಂಬರ್ 15ರ ಪತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ಸಿ.ಜಿ.ಡಿ ನೀತಿಯನ್ನು ಸೂಕ್ತವಾಗಿ ಅಳವಡಿಸಿಕೊಳ್ಳುವುದನ್ನು ಪರಿಗಣಿಸಲು ವಿನಂತಿಸಿ ಇದು ಸಿ.ಜಿ.ಡಿ ತ್ವರಿತ ಅನುಷ್ಠಾನ ಅನುಮತಿಗಳು / ಅನುಮೋದನೆಗಳನ್ನು ಪಡೆಯುವಲ್ಲಿ ತಪ್ಪಿಸಬಹುದಾದ ವಿಳಂಬವನ್ನು ತಡೆಯುತ್ತದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವರು 2021ನೇ ಅಕ್ಟೋಬರ್ 02 ಪತ್ರದನ್ವಯ ರಸ್ತೆ ಮರು ಸ್ಥಾಪನೆ / ಅನುಮತಿ ಶುಲ್ಕಗಳ ಪ್ರಮಾಣೀಕರವನ್ನು ಒಳಗೊಂಡಂತೆ ಸಿ.ಜಿ.ಡಿ ನೀತಿಯನ್ನು ಬೆಂಬಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ವಿನಂತಿಸಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಸಮೃದ್ಧ ಹಸಿರು ಮತ್ತು ಸ್ವಚ್ಛ ಪರಿಸರವನ್ನು ತರಲು ನೈಸರ್ಗಿಗಕ ಅನಿಲದ ಬಳಕೆಯನ್ನು ಹೆಚ್ಚಿಸಲು ಮತ್ತು ಅನಿಲ ಆಧಾರಿತ ಆರ್ಥಿಕತೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದ ನೆರವನ್ನು ಕೋರಿರುತ್ತಾರೆ.
ಉತ್ತರ ಪ್ರದೇಶ ಹಾಗೂ ಬೇರೆ ರಾಜ್ಯಗಳಲ್ಲಿರುವ ಇಂತಹ ಪ್ರಗತಿಪರ ಉಪಕ್ರಮಗಳನ್ನು ಗಮನಿಸಿ ರಾಜ್ಯದ ಸಿಜಿಡಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹಾಗೂ ರಾಜ್ಯದ ನಗರ ಅನಿಲ ಪೈಪ್ ಲೈನ್ ಮೂಲಸೌಕರ್ಯ ವಿತರಣಾ ಜಾಲದ ಅಭಿವೃದ್ಧಿ ನೀತಿಯನ್ನು ರಚಿಸಲಾಗಿದೆ.
ರಾಜ್ಯದಲ್ಲಿ ನೈಸರ್ಗಿಕ ಅನಿಲದ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯದಾದ್ಯಂತ ಅನಿಲ ಪೈಪ್‍ಲೈನ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ನೀತಿಯ ಮುಖ್ಯ ಉದ್ದೇಶವಾಗಿದೆ. ನೀತಿಯ ಮೂಲಕ ವಿವಿಧ ಜಿಲ್ಲೆಗಳಲ್ಲಿ ಅನುಮತಿ ಶುಲ್ಕಗಳ ಅಸಮಾನತೆಯನ್ನು ತೆಗೆದುಹಾಕಲು ಮತ್ತು ರಾಜ್ಯದಾದ್ಯಂತ ಏಕ ರೂಪದ ಅನುಮತಿ ಶುಲ್ಕಗಳು ಅನ್ವಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ನಗರ ಅನಿಲ ವಿತರಣಾ ಸಂಸ್ಥೆಗಳು ತಮ್ಮ ಭೌಗೋಳಿಕ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಿಜಿಡಿ ಹಾಗೂ ಅನುಮತಿ ಶುಲ್ಕಗಳಲ್ಲಿನ ಕಡಿತದ ಲಾಭವನ್ನು ಸಾರ್ವಜನಿಕರಿಗೆ ವರ್ಗಾಯಿಸುವ ಷರತ್ತನ್ನು ಈ ನೀತಿಯ ಅಧ್ಯಾಯ 6ರ ಷರತ್ತು (xii) ನಲ್ಲಿ ಸೇರಿಸಲಾಗಿದ್ದು, ಅದರಂತೆ ಸಿಜಿಡಿ ನೀತಿಯನ್ನು ಹೊರಡಿಸಲಾಗಿರುತ್ತದೆ. ಸದರಿ ನೀತಿಯನ್ನು ಹೊರಡಿಸಿದ ನಂತರ ಅನಿಲ ಪೈಪ್ ಅಳವಡಿಕೆಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳನ್ನು ಮೀಟರ್‍ಗೆ ರೂ 1/-ಕ್ಕೆ ಇಳಿಸುವ ಅನುಗುಣವಾದ ಪ್ರಯೋಜನವನ್ನು ಸಿಜಿಡಿ ಸಂಸ್ಥೆಗಳು ತಮ್ಮ ಭೌಗೋಳಿಕ ಪ್ರದೇಶಗಳಲ್ಲಿ ಪಿ.ಎನ್.ಜಿ ಮತ್ತು ಸಿ.ಎನ್.ಜಿ ಶುಲ್ಕಗಳಲ್ಲಿ ಸಾರ್ವಜನಿಕರಿಗೆ ವರ್ಗಾಯಿಸುವುದುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಎರಡಕ್ಕೂ 2023ನೇ ನವೆಂಬರ್ 08ರ ಪತ್ರದ ಮೂಲಕ ವಿನಂತಿಸಲಾಗಿದೆ. ನೀತಿಯ ಉಪಕ್ರಮಗಳಿಂದ ಬರುವ ಲಾಭವನ್ನು ಯಾವುದೇ ಸಿಜಿಡಿ ಸಂಸ್ಥೆಗಳಲ್ಲಿ ಉಳಿಸಿಕೊಳ್ಳದೇ ಸಾರ್ವಜನಿಕರಿಗೆ ವರ್ಗಾಯಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಅರ್ಥಿಕ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ನೀತಿಯನ್ನು ಸಿದ್ದಪಡಿಸಲಾಗಿದೆ. ಆರ್ಥಿಕ ಇಲಾಖೆ ಈಗಾಗಲೇ ಸಹಮತಿ ವ್ಯಕ್ತಪಡಿಸಿದೆ. ಸಚಿವ ಸಂಪುಟದ ಅನುಮೋದನೆಯ ಮೇರೆಗೆ ರಾಜ್ಯ ನಗರ ಅನಿಲ ವಿತರಣೆ (ಸಿ.ಜಿ.ಡಿ) ನೀತಿಯನ್ನು ಹೊರಡಿಸಲಾಗಿರುತ್ತದೆ ಎಂದು ತಿಳಿಸಿದರು.