ಬೆಂಗಳೂರು: ತುಮಕೂರಿನಲ್ಲಿ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ಭಾಗಿಯಾಗಿದ್ದ ಚುನಾವಣಾ ಪ್ರಚಾರ ಸಭೆಗೆ ಕಾಂಗ್ರೆಸ್ ಕಾರ್ಯಕರ್ತೆಯರು ನುಗ್ಗಿ ದಾಂಧಲೆ ಮಾಡಿರುವುದು ಗಂಭೀರ ಭದ್ರತಾ ಲೋಪವಾಗಿದೆ ಎಂದು ದೂರಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದಾರೆ.
ಅಲ್ಲದೆ; ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಈ ದಾಂಧಲೆ ನಡೆಸಿದ್ದಾರೆ. ತಮ್ಮ ಬೆಂಬಲಿಗರಿಗೆ ಡಿಕೆಶಿ ಅವರೇ ಕುಮ್ಮಕ್ಕು ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಲಾಗಿದೆ.
ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್, ತುಮಕೂರು ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು, ಬಿಜೆಪಿ ಕಾನೂನು ಘಟಕದ ಅಧ್ಯಕ್ಷ ವಸಂತ್ ಕುಮಾರ್, ಮುಖಂಡರಾದ ಹಿಮಾನಂದ, ದೇವರಾಜ್ ಅವರಿದ್ದ ನಿಯೋಗವು ಆಯೋಗಕ್ಕೆ ದೂರು ಸಲ್ಲಿಸಿದೆ.
ಇಂಥ ಘಟನೆಗಳಿಂದ ಕರ್ನಾಟಕದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯುವುದಕ್ಕೆ ದೊಡ್ಡ ಬೆದರಿಕೆಯಾಗಿದೆ. ಉಪ ಮುಖ್ಯಮಂತ್ರಿ ಅವರು ಮತದಾರರಲ್ಲಿ ದ್ವೇಷ ಭಾವನೆಯನ್ನು ಕೆರಳಿಸಿ ಶಾಂತಿ ಕದಡಲು ಪ್ರಯತ್ನ ನಡೆಸುತ್ತಿದ್ದಾರೆ. ಇದರಿಂದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ನಿರ್ಭೀತಿಯಿಂದ ಚುನಾವಣೆ ಪ್ರಚಾರ ನಡೆಸುವುದು ಕಷ್ಟವಾಗಿದೆ ಹಾಗೂ ಅವರ ಜೀವಕ್ಕೂ ಅಪಾಯವಿದೆ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತೆಯರು ಮಾಜಿ ಪ್ರಧಾನಿಗಳು ಹಾಜರಿದ್ದ ಸಭಾಂಗಣಕ್ಕೆ ನುಗ್ಗಿ ಗಲಭೆ ಎಬ್ಬಿಸಿದ ಸಂದರ್ಭದಲ್ಲಿ ಸ್ಥಳೀಯ ಪೋಲೀಸರು ಅವರನ್ನು ನಿಯಂತ್ರಿಸಲು ವಿಫಲರಾಗಿರುತ್ತಾರೆ. ಇದು ಗಂಭೀರ ಭದ್ರತಾ ಲೋಪವಾಗಿದೆ. ಆದ್ದರಿಂದ ಈ ಷಡ್ಯಂತ್ರ್ಯದ ಹಿಂದೆ ಇರುವ ಶಾಂತಿಘಾತುಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದುರುದ್ದೇಶಪೂರ್ವಕವಾಗಿ ಹಿಂಸೆಯನ್ನು ಪ್ರಚೋದಿಸಿ ಜನರಲ್ಲಿ ಭಯಭೀತಿ ಸೃಷ್ಟಿ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ಘೋಷಣೆಯಾದಾಗಿನಿಂದ ಅವರು ಮಾಡುತ್ತಿರುವ ಪ್ರಚೋದನಾತ್ಮಕ ಹಾಗೂ ದ್ವೇಷ ಕೆರಳಿಸುವ ಭಾಷಣಗಳು ಶಾಂತಿಯುವ ಚುನಾವಣೆಯನ್ನು ಹಾಳು ಮಾಡಬೇಕೆನ್ನುವ ಅವರ ಷಡ್ಯಂತ್ರ್ಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ರಾಜ್ಯದ ಅಧಿಕಾರಿಗಳು ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಮರ್ಜಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದು; ಯಾವುದೇ ತನಿಖೆ, ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದಾರೆ. ಆದ್ದರಿಂದ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು, ಇದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಯುಕ್ತರಿಗೆ ಎನ್ ಡಿಎ ನಾಯಕರು ಮನವಿ ಮಾಡಿದ್ದಾರೆ.
ಇದೇ ಏಪ್ರಿಲ್ 15ರಂದು ಚುನಾವಣೆ ಆಯೋಗದ ಅನುಮತಿಯನ್ನು ಪಡೆದು ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ.ಸೋಮಣ್ಣ ಅವರ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರಂತೆ ಸಭಾಂಗಣದೊಳಕ್ಕೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು ದಾಂಧಲೆ ಉಂಟು ಮಾಡಿದ್ದರು ಎಂಬುದನ್ನು ಸ್ಮರಿಸಬಹುದು.
ಮಹಿಳಾ ಆಯೋಗಕ್ಕೆ ಮತ್ತೆರಡು ದೂರು
ನಟಿ ಮತ್ತು ಸಂಸದರಾದ ಹೇಮಾಮಾಲಿನಿ ಅವರ ಬಗ್ಗೆ ಕೀಳು, ಕೆಟ್ಟ ಅಭಿರುಚಿಯ ಹೇಳಿಕೆ ನೀಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ಹಾಗೂ ಮಹಿಳೆಯರು ಮನೆಯಲ್ಲೇ ಇರಲು ಲಾಯಕ್ಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರುಗಳ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ಮತ್ತೆ ಎರಡು ದೂರುಗಳು ಸಲ್ಲಿಕೆಯಾಗಿವೆ.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಜಾತಾ ಗೌಡ ಹಾಗೂ ನಮ್ಮ ಕರ್ನಾಟಕ ರಾಜ್ಯದ ಕಟ್ಟಡ ಕಾರ್ಮಿಕರ ಸೇವಾ ಸಂಘದ ಸದಸ್ಯೆ ಎಂ.ದೇವಿ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿ, ಈ ಇಬ್ಬರು ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ನಕಲಿ ರಾಜಕೀಯ ಜಾಹೀರಾತಿನ ವಿರುದ್ಧ ನಟ ‘ಅಮೀರ್ ಖಾನ್’ ದೂರು, ‘FIR’ ದಾಖಲು
BREAKING: ಬಿಜೆಪಿ ಪಕ್ಷಕ್ಕೆ ‘ಸಂಸದ ಕರಡಿ ಸಂಗಣ್ಣ’ ಗುಡ್ ಬೈ, ನಾಳೆ ಅಧಿಕೃತವಾಗಿ ‘ಕಾಂಗ್ರೆಸ್ ಪಕ್ಷ’ ಸೇರ್ಪಡೆ